ವಿಜಯವಾಣಿ ಸುದ್ದಿಜಾಲ ಬೈಂದೂರು
ಆತ್ಮರಕ್ಷಣೆ ಕಲೆಯಾಗಿರುವ ಕರಾಟೆ ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಒದಗುವ ವಿದ್ಯೆಯೂ ಹೌದು. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯ ಹಾಗೂ ಸುಪ್ತ ಪ್ರತಿಭೆಯನ್ನು ಇಂತಹ ಕೌಶಲಯುತ ಕಲೆಗಳ ತರಬೇತಿಗಳ ಮೂಲಕ ಹೊರಹೊಮ್ಮಿಸುವುದರ ಜತೆಗೆ ಅವರ ಅಭಿವೃದ್ಧಿಗಾಗಿ ಮತ್ತು ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಇದು ಸಹಕಾರಿಯಾಗಬಲ್ಲದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಬಿ.ಕರುಣಾಕರ ಶೆಟ್ಟಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅನುದಾನಿತ ಪ್ರೌಢಶಾಲೆಯಲ್ಲಿ ಕರಾಟೆ ತರಬೇತಿ ತರಗತಿ ಉದ್ಘಾಟಿಸಿ ಮಾತನಾಡಿದರು.
ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿ ನಿರಾಯುಧನಾಗಿಯೂ ಜೀವ ರಕ್ಷಣೆ ಮಾಡಿಕೊಳ್ಳುವ ಸುಲಭ ವಿಧಾನವನ್ನು ಕರಾಟೆ ಕಲಿಸುತ್ತದೆ. ಪ್ರತಿ ಮಗು ಆತ್ಮರಕ್ಷಣೆಯಲ್ಲಿ ಸ್ವಾವಲಂಬಿಯಾಗಬೇಕೆಂಬುದು ನಮ್ಮ ಉದ್ದೇಶ. ಬಾಲ್ಯದಿಂದಲೇ ಇಂತಹ ತರಬೇತಿಗಳನ್ನು ಪಡೆಯುವ ಮೂಲಕ ಭವಿಷ್ಯದಲ್ಲಿ ಮಕ್ಕಳು ಪ್ರಯೋಜನ ಪಡೆಯಬಹುದು ಎಂದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಮಾಜಿ ಸದಸ್ಯ ಕೆ.ರಮೇಶ ಗಾಣಿಗ, ಕೊಲ್ಲೂರು ಗ್ರಾಪಂ ಅಧ್ಯಕ್ಷೆ ಪ್ರಸನ್ನಾ ಶರ್ಮ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ., ಕರಾಟೆ ತರಬೇತುದಾರ ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ ಆಂ್ಯಡ್ ಫಿಟ್ನೆಸ್‌ನ ಅಕ್ಷಯ್ ಹೆಮ್ಮಾಡಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ನಾಗರಾಜ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಚಿನ್‌ಕುಮಾರ್ ಶೆಟ್ಟಿ ಹುಂಚನಿ ನಿರೂಪಿಸಿದರು.