ಜಿಲ್ಲೆ

ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ; ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಅಭಿಮತ

ಈಳಿಗನೂರಲ್ಲಿ ಶೈಕ್ಷಣಿಕ ಗ್ರಾಮ ವಾಸ್ತವ್ಯ

ಕಾರಟಗಿ: ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂದು ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಹೇಳಿದರು.

ಈಳಿಗನೂರಿನ ಸ.ಹಿ.ಪ್ರಾ. ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸಾಮುದಾಯಿಕ ತೊಡಗಿಕೊಳ್ಳುವಿಕೆ ಹಾಗೂ ಮಕ್ಕಳ ಕಲಿಕೆಯ ಉತ್ತೇಜನಕ್ಕಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಮೊದಲ ಯತ್ನವಾಗಿ ಬಿಇಒ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ರಾಜ್ಯಕ್ಕೆ ಮಾದರಿ. ವಿದ್ಯಾರ್ಥಿಗಳ ಬುದ್ಧಿಮಟ್ಟ ಹೆಚ್ಚಳ, ಶಾಲೆಗೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹಾರ ಕಾರ್ಯ ಕ್ರಮ ರಾಜ್ಯದ ತುಂಬ ವಿಸ್ತರಿಸಬೇಕು. ಆಗ ಮಾತ್ರ ಬಹು ವರ್ಷಗಳಿಂದ ನನೆಗುದಿಗೆ ಬಿದ ಕಾರ್ಯ ಪೂರ್ಣಗಳ್ಳುತ್ತವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲಾದ್ಯಂತ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಬಿಇಒ ಸೋಮಶೇಖರಗೌಡ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ ಕುಮಾರ ಅವರ ಶಾಲಾ ವಾಸ್ತವ್ಯದಿಂದ ಪ್ರೇರಣೆಗೊಂಡು, ಶೈಕ್ಷಣಿಕ ಗ್ರಾಮ ವಾಸ್ತವ್ಯ ಆರಂಭಿಸಿದ್ದೇನೆ. ಈ ಮೂಲಕ ಶಾಲೆಯೊಂದಿಗೆ ಸಮುದಾಯ, ಇಲಾಖೆಗಳನ್ನು ಬೆಸೆಯುವುದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಇದರ ಮುಖ್ಯ ಉದ್ದೇಶ ಎಂದರು.

ತಾಪಂ ಸದಸ್ಯರಾದ ಮಹ್ಮದ್ ರಫಿ, ಗವಿಸಿದ್ದಪ್ಪ, ಗಂಗಾವತಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣೇಗೌಡ, ಅಮರೇಶ ಮೈಲಾಪುರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಾರದಮ್ಮ ಗವಿಸಿದ್ದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕುರುಬರ, ಕ್ಷೇತ್ರ ಸಮನ್ವಯ ಅಧಿಕಾರಿ ವೀರಭದ್ರಪ್ಪ ಗೊಂಡಬಾಳ, ಬಿಆರ್‌ಪಿ ಶಂಕ್ರಪ್ಪ, ಸಿಆರ್‌ಪಿ ನಜೀರ್ ಅಹ್ಮದ್, ಕಸಾಪ ಅಧ್ಯಕ್ಷ ಚೆನ್ನಬಸಪ್ಪ ವಕ್ಕಳದ್, ತಿಮ್ಮಣ್ಣ ನಾಯಕ, ಬಸವರಾಜ ರ್ಯಾವಳದ್, ಶರಣಪ್ಪ ಹಕ್ಕಂಡಿ ಇತರರು ಇದ್ದರು.

ತಳಿರು-ತೋರಣಗಳಿಂದ ಸಿಂಗಾರಗೊಂಡಿತ್ತು. ಶಾಲೆ ಮುಖ್ಯದ್ವಾರಕ್ಕೆ ಬಾಳೆ ದಿಂಡು, ಮಾವಿನ ತೋರಣ, ತೆಂಗಿನ ಗರಿಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಶಾಲೆಯ ಗೋಡೆಯ ತುಂಬ ಬಿಡಿಸಲಾಗಿದ್ದ ಪುರಾತನ ವರ್ಲಿ ಕಲೆಯ ಚಿತ್ರಗಳು ಆಕರ್ಷಿಸಿದವು. ಈ ವೇಳೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಚ್. ವಿಶ್ವನಾಥ ರಡ್ಡಿ ಶಾಲಾ ಆವರಣದಲ್ಲಿ ಸಸಿ ನೆಟ್ಟು, ನೀರೆರೆದರು. ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.