ಕಾರಟಗಿ ಕನಕದಾಸ ವೃತ್ತದ ಬಳಿ ಹಿಂದು ಕಾರ್ಯಕರ್ತರು ಹಾಗೂ ಯತ್ನಾಳ್ ಅಭಿಮಾನಿ ಬಳಗದವರು ಗುರುವಾರ ಪ್ರತಿಭಟನೆ ನಡೆಸಿದರು. ಪದಾಧಿಕಾರಿಗಳಾದ ಅಮರೇಶ್ ಕುಳಗಿ, ವೀರಭದ್ರಪ್ಪ ಕಟಾಂಬ್ಲಿ, ಬಸವರಾಜ ಎತ್ತಿನಮನಿ, ಪಂಪನಗೌಡ ಜಂತಗಲ್, ದುರುಗೇಶ್ ಹೊಸ್ಕೇರಾ, ಕಳಕನ ಗೌಡ ಪಾಟೀಲ್ ಕಲ್ಲೂರ್ ಇತರರಿದ್ದರು.  
ಜಿಲ್ಲೆ

ಉಚ್ಚಾಟನೆ ಕ್ರಮ ಮರು ಪರಿಶೀಲಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಕಾರಟಗಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮ ಖಂಡಿಸಿ ಪಟ್ಟಣದ ಕನಕದಾಸ ವೃತ್ತದಲ್ಲಿ ಹಿಂದು ಕಾರ್ಯಕರ್ತರು ಹಾಗೂ ಯತ್ನಾಳ್ ಅಭಿಮಾನಿ ಬಳಗದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಬಳಗದ ಪದಾಧಿಕಾರಿಗಳಾದ ಅಮರೇಶ್ ಕುಳಗಿ, ವೀರಭದ್ರಪ್ಪ ಕಟಾಂಬ್ಲಿ, ಬಸವರಾಜ ಎತ್ತಿನಮನಿ ಮಾತನಾಡಿ, ಯತ್ನಾಳ್ ಅವರು ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಹಿಂದುಗಳನ್ನು ಒಗ್ಗೂಡಿಸಿದ್ದಾರೆ. ವಕ್ಫ್ ಹೋರಾಟದ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ನೇರ ಹಾಗೂ ನಿಷ್ಠುರ ನುಡಿಗಳನ್ನಾಡುವ ಯತ್ನಾಳ್‌ರಂತ ರಾಜಕಾರಣಿಗಳು ಬೇಕು. ಆದರೆ, ಬಿಜೆಪಿ ಏಕಾಏಕಿ ಅವರನ್ನು ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಪಕ್ಷದ ವಿರುದ್ಧ ಅನೇಕ ನಾಯಕರು ಮಾತನಾಡಿದ್ದು, ಉಳಿದವರಿಗೆ ಕೇಂದ್ರದಿಂದ ಕೇವಲ ನೋಟಿಸ್ ನೀಡಿ ಕೈ ತೊಳೆದುಕೊಳ್ಳಲಾಗಿದೆ.

ಆದರೆ, ಯತ್ನಾಳ್ ವಿರುದ್ಧ ಮಾತ್ರ ಶಿಸ್ತು ಕ್ರಮ ಕೈಗೊಂಡಿರುವುದು ಎಷ್ಟು ಸರಿ?. ಪಕ್ಷದ ನಾಯಕರೇ ಷಡ್ಯಂತ್ರ ಮಾಡಿ ಯತ್ನಾಳ್ ಅವರನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ. ಹೈಕಮಾಂಡ್ ಈ ಕ್ರಮವನ್ನು ಮರು ಪರಿಶೀಲಿಸಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ನಗರದ ಪುರಸಭೆ ಕಚೇರಿ ರಸ್ತೆಯಿಂದ ಕನಕದಾಸ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹಿಂದು ಕಾರ್ಯಕರ್ತರು ಹಾಗೂ ಯತ್ನಾಳ್ ಅಭಿಮಾನಿ ಬಳದ ಪದಾಧಿಕಾರಿಗಳಾದ ಪಂಪನಗೌಡ ಜಂತಗಲ್, ದುರುಗೇಶ್ ಹೊಸ್ಕೇರಾ, ಕಳಕನ ಗೌಡ ಪಾಟೀಲ್ ಕಲ್ಲೂರ್, ರವಿಕುಮಾರ್ ತಿಮ್ಮಾಪುರ್, ಪಂಪನಗೌಡ ಕೋಲ್ಕಾರ್, ವಿನೋದ್ ಕುಳಗಿ, ಮಲ್ಲನಗೌಡ ಮಾಲಿಪಾಟೀಲ್, ಪರಮೇಶಪ್ಪ ಕೋಲ್ಕಾರ್, ಮಾರ್ಕಂಡೇಶ ಮರಳಿ, ಬಸವರಾಜ ಪಾಟೀಲ್ ಇತರರಿದ್ದರು.