ಕಾರಟಗಿ: ದ್ಯಾವಮ್ಮದೇವಿ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿ ಆರಂಭ ಪೂರ್ವದಲ್ಲಿ ಸರ್ವಸಮುದಾಯಗಳ ಪ್ರಮುಖರ ನೇತೃತ್ವದಲ್ಲಿ ಟ್ರಸ್ಟ್ ರಚಿಸುವ ಜತೆಗೆ ಸಂತ್ರಸ್ತರಿಗೆ ದೇವಿಕ್ಯಾಂಪ್‌ನಲ್ಲಿ ನಿವೇಶನ ನೀಡುವ ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅನೇಕ ವಿಷಯಗಳ ಕುರಿತು ಒಮ್ಮತ ವ್ಯಕ್ತವಾಯಿತು. ಊರಿನಲ್ಲಿ ಹಾಲಿ ಮತ್ತು ಮಾಜಿ ಸಚಿವ, ಶಾಸಕ ಸೇರಿ ಅನೇಕ ಹಿರಿಯರಿದ್ದಾರೆ. ಇಲ್ಲಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅವರ ಮುಂದಿಟ್ಟು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಮಿತಿ ರಚನೆ ಬದಲಾಗಿ ಸರ್ವಸಮುದಾಯಗಳ ಪ್ರಮುಖರನ್ನೊಳಗೊಂಡ ಟ್ರಸ್ಟ್ ರಚಿಸಬೇಕು.
ಅಂದಾಗ ಮಾತ್ರ ದೇವಸ್ಥಾನ ನಿರ್ಮಾಣಕ್ಕೆ ಪಡೆಯುವ ಧನಸಹಾಯ, ದೇಣಿಗೆ ಸಂಗ್ರಹದ ಪಾರದರ್ಶಕ ಲೆಕ್ಕಪತ್ರ ದೊರೆಯಲಿದೆ. ಅಲ್ಲದೇ, ಉದ್ಯಮಿ, ನೌಕರದಾರರಿಂದ ದೇಣಿಗೆ ಸಂಗ್ರಹಿಸಲು ಅನುಕೂಲವಾಗಲಿದೆ. ತಲೆಮಾರುಗಳಿಂದ ದೇವಸ್ಥಾನ ಸುತ್ತಲೂ ವಾಸಿಸುತ್ತಿದ್ದ ನಿವಾಸಿಗಳ ಅಳಲನ್ನು ಆಲಿಸಿ ದೇವಿಕ್ಯಾಂಪ್‌ನಲ್ಲಿ ಸೂಕ್ತ ನಿವೇಶನ ನೀಡಬೇಕು. ರೈಲ್ವೆ ಇಲಾಖೆಯಿಂದ ದೇವಸ್ಥಾನ ಜಮೀನಿಗೆ ಬಂದ ಪರಿಹಾರ ಧನದಲ್ಲಿ ಪೂಜಾರಿಗಳು, ಸಂತ್ರಸ್ತರು ಶೆಡ್ ನಿರ್ಮಿಸಿಕೊಳ್ಳಲು ಸಹಾಯ ಮಾಡಬೇಕು.
ಜತೆಗೆ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಬೇಕು. ರಾಜ್ಯದ ಅನೇಕ ದೇವಸ್ಥಾನಗಳು, ಮಠ-ಮಾನ್ಯಗಳಿಗೆ ಪಟ್ಟಣದಿಂದ ದೇಣಿಗೆ ನೀಡಲಾಗುತ್ತದೆ. ಗ್ರಾಮದೇವತೆ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರೂ ದೇಣಿಗೆ ನೀಡಲಿದ್ದಾರೆ. ಅಕ್ಕಿ ಗಿರಣಿ ಮಾಲೀಕರು, ದಲಾಲಿ ವರ್ತಕರು ಸೇರಿ ಅನೇಕರಿಂದ ದೇಣಿಗೆ ಸಂಗ್ರಹಿಸಬೇಕು. ಕಾರಟಗಿ ಸೀಮೆ ವ್ಯಾಪ್ತಿಯ ಪ್ರತಿ ಎಕರೆಗೆ ಒಂದು ಚೀಲ ಭತ್ತವನ್ನು ಪಡೆದುಕೊಳ್ಳಬೇಕು. ಟ್ರಸ್ಟ್ ರಚಿಸಿ ಶ್ರಾವಣ ಮಾಸದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಿ ಭೂಮಿ ಪೂಜೆ ನೆರವೇರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ವೇ.ಮೂ.ಮರುಳಸಿದ್ದಯ್ಯಸ್ವಾಮಿ ಹಿರೇಮಠ, ಪ್ರಮುಖರಾದ ಬಿ.ಶಿವರೆಡ್ಡಿ ನಾಯಕ, ವೀರೇಶ ಸಾಲೋಣಿ, ಶಶಿಧರಗೌಡ ಪಾಟೀಲ್, ಎಚ್.ಈಶಪ್ಪ, ಚನ್ನಬಸಪ್ಪ ಸುಂಕದ್, ಅಮರೇಶ ಕುಳಗಿ, ಕೆ.ಸಿದ್ದನಗೌಡ, ನಾಗರಾಜ ಬಿಲ್ಗಾರ್, ನಾಗರಾಜ ಅರಳಿ, ಬೂದಿ ಗಿರಿಯಪ್ಪ, ಪ್ರಹ್ಲಾದ ಜೋಶಿ, ಮರಿಯಪ್ಪ ಸಾಲೋಣಿ, ತಾಯಪ್ಪ ಕೋಟ್ಯಾಳ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಜಿ.ಯಂಕನಗೌಡ, ಬಸವರಾಜ ಪಗಡದಿನ್ನಿ, ಶರಣಪ್ಪ ದಿವಟರ್, ಗದ್ದೆಪ್ಪ ನಾಯಕ ಇತರರಿದ್ದರು.
ಪುರಸಭೆ ಹಾಗೂ ಗ್ರಾಮದ ಸಾರ್ವಜನಿಕರು ನಿಗದಿಗೊಳಿಸಿ, ಸಿದ್ಧಪಡಿಸಿದ ಪಟ್ಟಿಯಂತೆ ಗುಡಿಸಲು, ಶೆಡ್, ಅಂಗಡಿಗಳನ್ನು ತೆರವುಗೊಳಿಸಬೇಕು. ಬಡವರಿಗೆ ಒಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯ ಎನ್ನುವಂತಾಗಬಾರದು. ದೇವಸ್ಥಾನ ಎದುರು ಇರುವ ಆರ್‌ಜಿ ರಸ್ತೆಯಿಂದ ಬಲಭಾಗಕ್ಕೆ ತೆರವುಗೊಳಿಸಿದಷ್ಟು ಎಡಭಾಗಕ್ಕೂ ತೆರವುಗೊಳಿಸಬೇಕು ಎಂದು ಸಭೆ ಮನವಿ ಮಾಡಿತು.