ಜಿಲ್ಲೆ

ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕಾರಟಗಿ: ಪಟ್ಟಣದ ಕನಕದಾಸ ವೃತ್ತದ ಹೊಸ ಬಸ್‌ನಿಲ್ದಾಣದ ಮುಂದೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು ಮತ್ತೊರ್ವನಿಗೆ ಗಂಭೀರ ಗಾಯಗಳಾದ ಘಟನೆ ಸೋಮವಾರ ನಡೆದಿದೆ.

ಹನುಮಂತಪ್ಪ ಉಪ್ಪಾರ (45) ಮೃತ ದುರ್ದೈವಿ. ಮಂಜುನಾಥ ಎಂಬಾತನಿಗೆ ಸೊಂಟದ ಮೂಳೆ ಮುರಿದಿದ್ದು ಕುತ್ತಿಗೆ, ಬಲಗೈ ಗಂಭೀರ ಗಾಯಗಳಾಗಿವೆ. ಇವರು, ತಾಲೂಕಿನ ಸೋಮನಾಳದ ನಿವಾಸಿಗಳಾಗಿದ್ದು, ಬೈಕ್ ಮೇಲೆ ಕನಕದಾಸ ವೃತ್ತದ ಹೊಸ ಬಸ್‌ನಿಲ್ದಾಣದ ಮುಂದೆ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಸಿಂಧನೂರಿನಿಂದ ಗಂಗಾವತಿ ಕಡೆಯ ರಸ್ತೆಯಲ್ಲಿ ತೆರಳುತ್ತಿದ್ದರು.

ಅತೀ ವೇಗವಾಗಿ ಬಂದ ಟ್ರ್ಯಾಕ್ಟರ್ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಹನುಮಂತಪ್ಪ ಉಪ್ಪಾರ್ ಎಡಗಾಲಿನ ಮೊಣಕಾಲು ಮೂಳೆ ಮುರಿದಿದ್ದಲ್ಲದೇ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಮಂಜುನಾಥನಿಗೆ ಗಂಭೀರಗಾಯಗಳಾಗಿವೆ. ಹನುಮಂತಪ್ಪನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಗಾಯಾಳು ಮಂಜುನಾಥನಿಗೆ ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಜಾಗುರಕತೆಯಿಂದ ಟ್ರ್ಯಾಕ್ಟರ್ ಚಲಾಯಿಸಿದ ಚಾಲಕ ಮಹ್ಮದ್ ಜಾಫರ್ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಮೃತ ಹನುಮಂತಪ್ಪ ಉಪ್ಪಾರ್ ಸಹೋದರ ಶಿವಪ್ಪ ಉಪ್ಪಾರ್ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.