ಕಾರಟಗಿ: ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಸಿಐಡಿ ಸರ್ಕಾರದ ನಿರ್ದೇಶನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ತಾಲೂಕಿನ ಸೋಮನಾಳ ಗ್ರಾಮದ ಮೃತ ಪಿಎಸ್‌ಐ ಪರಶುರಾಮ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜನಸಾಮಾನ್ಯರು ಅಪಾರಧ ಎಸಗಿದ ಕೂಡಲೇ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುತ್ತದೆ. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಮತ್ತು ಆತನ ಪುತ್ರ ಕರ್ತವ್ಯ ಮುಂದುವರಿಸಲು ಲಕ್ಷಾಂತರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಪಿಎಸ್‌ಐ ಪರಶುರಾಮ ಮನನೊಂದು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಬೇಕಾದ ಸಾಕಷ್ಟು ಪುರಾವೆಗಳು ಈಗಾಗಲೇ ದೊರೆತಿದೆ. ಆದರೂ ಸಿಐಡಿ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸದೇ ಸರ್ಕಾರದ ನಿರ್ದೇಶನದಲ್ಲಿ ಮಾಡುತ್ತಿದೆ. ಈ ಪ್ರಕರಣ ಕುರಿತು ಬಿಜೆಪಿ ಸುಮ್ಮನೇ ಕೂರುವುದಿಲ್ಲ. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
ನಿಮ್ಮೊಂದಿಗೆ ಬಿಜೆಪಿ ಹಾಗೂ ನಾಯಕರು ಸದಾ ಇದ್ದೇವೆ. ನೀವು ಎದೆಗುಂದುವುದು ಬೇಡ. ಪಿಎಸ್‌ಐ ಸಾವಿಗೆ ನ್ಯಾಯ ದೊರೆಯುವವರೆಗೂ ಹೋರಾಟ ನಡೆಸುತ್ತೇವೆ ಎಂದು ಕುಟುಂಬಸ್ಥರಿಗೆ ಶೆಟ್ಟರ್ ಸಾಂತ್ವನ ಮತ್ತು ಭರವಸೆ ನೀಡಿದರು.
ಪಿಎಸ್‌ಐ ಪರಶುರಾಮ ಕೇವಲ ನಮ್ಮ ಮನೆಯ ಮಗನಲ್ಲ. ಈ ನಾಡಿನ ಮಗ. ಪ್ರಾಮಾಣಿಕ ಅಧಿಕಾರಿ ಕಳೆದುಕೊಂಡ ಪೊಲೀಸ್ ಇಲಾಖೆಯೇ ಮೌನ ವಹಿಸಿದೆ. ಸಿಐಡಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ನಮ್ಮ ಕುಟುಂಬದಿಂದ ಸಮರ್ಪಕ ಮಾಹಿತಿ ಪಡೆದುಕೊಳ್ಳುತ್ತಿಲ್ಲ. ಅವರ ನಡೆ ನಮಗೆ ಅನುಮಾನ ಮೂಡಿಸಿದೆ. 15ದಿನಗಳು ಕಳೆಯುತ್ತಾ ಬಂದರೂ ಯಾದಗಿರಿ ಶಾಸಕ ಮತ್ತು ಆತನ ಪುತ್ರನನ್ನು ಬಂಧಿಸಿಲ್ಲ. ಹಾಗಾಗಿ ಸಿಐಡಿ ಮತ್ತು ಸರ್ಕಾರದಿಂದ ನಮಗೆ ನ್ಯಾಯ ದೊರೆಯುವ ನಂಬಿಕೆಯಿಲ್ಲ. ತಾವು ಸರ್ಕಾರದ ಮೇಲೆ ಒತ್ತಡ ಹೇರಿ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತ ಪಿಎಸ್‌ಐ ಪರಶುರಾಮ ಸಹೋದರ ಹನುಮಂತಪ್ಪ ಸಂಸದ ಜಗದೀಶ ಶೆಟ್ಟರ್ ಮುಂದೆ ಅಲವೊತ್ತುಕೊಂಡರು.