ಕಾರಟಗಿ : ತಾಲೂಕು ವ್ಯಾಪ್ತಿಯಲ್ಲಿ ನಾಟಿ ಮಾಡಿರುವ ಭತ್ತದ ಬೆಳೆ ಹಾಗೂ ಸಸಿ ಮಡಿಗಳಿಗೆ ಕೊಳವೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುತ್ತಿಗೆ ನಿಗದಿ ಪಡಿಸುವ ಸಂಬಂಧ ರೈತ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ರೈತರ ಸಭೆ ನಡೆಯಿತು.
ಕಳೆದ ಬಾರಿ ಕೊಳವೆ ರೋಗದಿಂದ ಭಾಗದಲ್ಲಿ ಇಳುವರಿ ಕುಸಿತ ಕಂಡಿದೆ. ಸಾವಿರಾರು ರೂ. ವ್ಯಯಿಸಿ ಬೆಳೆ ಬೆಳೆದ ರೈತರಿಗೆ ಖರ್ಚು ಮಾಡಿದ ಹಣ ಸಹ ಕೈಸೇರಿಲ್ಲ. ಪರಿಸ್ಥಿತಿ ಹೀಗಿರುವಾಗ ಈಗ ಮತ್ತೆ ನಾಟಿ ಮಾಡಿದ ಭತ್ತಕ್ಕೆ ಹಾಗೂ ಸಸಿ ಮಡಿಗಳಿಗೆ ತಾಲೂಕಿಕ ಮೈಲಾಪುರ, ಯರಡೋಣ, ಬೂದಗುಂಪಾ ಸೇರಿ ಇತರೆಡೆ ಕೊಳವೆ ರೋಗ ಕಾಣಿಸಿಕೊಂಡಿರುವುದು ರೈತರನ್ನು ದಿಗಿಲುಗೊಳಿಸಿದೆ. ಹೀಗಾಗಿ ದೊಡ್ಡ ಹಿಡುವಳಿ ರೈತರು ಸಣ್ಣ ರೈತರಿಗೆ ಜಮೀನು ಗುತ್ತಿಗೆ ನೀಡಿದ ವೇಳೆ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಎಕರೆಗೆ 15, 20, 25 ಮೂಟೆ ಭತ್ತ ಬೆಳೆದರೆ ಕಡಿಮೆ ಗುತ್ತಿಗೆ ಪಡೆಯಿರಿ. 35-40 ಅಥವಾ ಅದಕ್ಕೆ ಮೇಲ್ಪಟ್ಟು ಬೆಳೆ ಬಂದರೆ ನಿಗದಿ ಪಡಿಸಿದ ಗುತ್ತಿಗೆ ಪಡೆಯಿರಿ ಎಂದು ರೈತರು ಮನವಿ ಮಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಎಲಿಗಾರ್ ಹಾಗೂ ವಿಜ್ಞಾನಿ ಸುಜಯ್ ಹುರುಳಿ ಮಾತನಾಡಿ, ಕೊಳವೆ ಕೀಟ ರಾತ್ರಿ ವೇಳೆಯಲ್ಲಿ ಚುರುಕಾಗಿರುವುದರಿಂದ ದೀಪದ ಬಲೆಗಳನ್ನು ಹಾಕಿ ಆಕರ್ಷಿಸಿ ಕೊಲ್ಲಬೇಕು. ಆಶ್ರಯ ಸಸ್ಯಗಳು ಇರದ ಹಾಗೆ ನೋಡಿಕೊಳ್ಳಬೇಕು. ರಾಸಾಯನಿಕಗಳಾದ ಕ್ಲೋರಾಂಟ್ರಿನಿಲಿಪ್ರೋಲ್ 50.ಎಫ್.ಎಸ್. 4 ಮಿ.ಲೀ. ಪ್ರತಿ ಕೆ.ಜಿ. ಬೀಜಕ್ಕೆ ಬೀಜೋಪಚಾರ ಮಾಡಬೇಕು. ಕ್ಲೋರ್‌ಪೈರಿಪಾಸ್ 20. ಇ.ಸಿ. 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೇರೆಸಿ ಬೀಜವನ್ನು ಅರ್ಧಗಂಟೆ ಈ ದ್ರಾವಣದಲ್ಲಿ ನೆನೆಸಿ ಸಸಿಮಡಿಗೆ ಬಳಸಬೇಕು. ಥಯೋಮಿಥಾಕ್ಸಮ್ 0.2 ಗ್ರಾಂ. ಅಥವಾ ಕಾರ್ಬೋಸಲ್ಫಾನ್ 25% ಇ.ಸಿ. 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಹರಳು ರೂಪದ ಕೀಟ ನಾಶಕಗಳನ್ನು (300 ಚ.ಮೀ. ಪ್ರದೇಶಕ್ಕೆ) ಬಿತ್ತನೆ ಮಾಡಿದ 15 ದಿನಕ್ಕೆ ಪೀಪ್ರೋನಿಲ್ 0.6 ಜಿ. 300 ಗ್ರಾಂ. ಅಥವಾ ಕ್ಲೋರಾಂಟ್ರಿನಿಲಿಪ್ರೋಲ್ + 10 ಥಯೋಮಿಥಾಕ್ಸಮ್, 180 ಗ್ರಾಂ ಹರಳಗಳನ್ನು ಎರಚಬೇಕು. ಈ ಮೂಲಕ ರಸಾಯನಿಕ ಬಳಸುವ ಮೂಲಕ ರೋಗ ಹತೋಟಿಗೆ ತರಬಹುದು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಎ.ಡಿ. ಸಂತೋಷ ಪಟ್ಟದಕಲ್ಲು, ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜ, ಮಾರುತಿ, ರೈತ ಮುಖಂಡರಾದ ಶರಣಪ್ಪ ದೊಡ್ಡಮನಿ, ನಾರಾಯಣ ಈಡಿಗೇರ, ಮರಿಯಪ್ಪ ಸಾಲೋಣಿ, ಸಣ್ಣ ರಾಮಣ್ಣ, ಮೌಲಾಸಾಬ್, ರಮೇಶ ಭಂಗಿ, ಯಮನಪ್ಪ ಉಳೇನೂರು, ದೊಡ್ಡನಗೌಡ ಶಿವಪೂಜೆ ಇದ್ದರು.