ಬಿಸಿಯೂಟ ಯೋಜನೆ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥಗಳಿಗೆ ವಹಿಸಲು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರಟಗಿ ತಾಲೂಕು ಘಟಕದ ಪದಾಧಿಕಾರಿಗಳು ಗಂಗಾವತಿಯಲ್ಲಿ ಪ್ರಭಾರ ಬಿಇಒ ಮಂಜುನಾಥ ವಸ್ತ್ರದ್‌ಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕಾಧ್ಯಕ್ಷ ವಿಠ್ಠಲ ಜೀರಗಾಳಿ, ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಹೋಮಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಬೆನಕಟ್ಟಿ ದ್ಯಾಮಪ್ಪ, ಬಲ ಭೀಮರಾವ್ ಜ್ಯೋಷಿ, ಖಜಾಂಚಿ ವಿರೂಪಾಕ್ಷಪ್ಪ ಇತರರಿದ್ದರು.  
ಜಿಲ್ಲೆ

ಬಿಸಿಯೂಟ ಜವಾಬ್ದಾರಿ ಸರ್ಕಾರೇತರ ಸಂಸ್ಥೆಗೆ ವಹಿಸಿ

ಕಾರಟಗಿ: ಸರ್ಕಾರದ ಮಹತ್ವಾಕಾಂಕ್ಷಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರಟಗಿ ತಾಲೂಕು ಘಟಕದ ಪದಾಧಿಕಾರಿಗಳು ಗಂಗಾವತಿಯಲ್ಲಿ ಪ್ರಭಾರ ಬಿಇಒ ಮಂಜುನಾಥ ವಸ್ತ್ರದ್‌ಗೆ ಶನಿವಾರ ಮನವಿ ಸಲ್ಲಿಸಿದರು.

ಬಿಸಿಯೂಟ ಯೋಜನೆ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ನೆರವಿನಿಂದ ಈಗ ಸುಗಮವಾಗಿ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಈ ಕಾರ್ಯಕ್ರಮದಿಂದ ಮುಖ್ಯಶಿಕ್ಷಕಕರು ಹಾಗೂ ಶಿಕ್ಷಕರಿಗೆ ಹೊರೆಯಾಗುತ್ತಿದೆ. ಮಕ್ಕಳಿಗೆ ವಿತರಿಸಲು ಬೇಕಾದ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿಯನ್ನು ಮಾರುಕಟ್ಟೆಗೆ ಹೋಗಿ ನಾವೇ ತರಬೇಕಿದೆ.

ಪ್ರಸ್ತುತ ಇವುಗಳ ಬೆಲೆಯೂ ಏರಿಕೆ ಕಂಡಿವೆ. ಇಲಾಖೆ ಮಾರ್ಗಸೂಚಿ ಪ್ರಕಾರ ಒಂದು ಮೊಟ್ಟೆಗೆ 5.20 ಪೈಸೆ ಅನುದಾನವಿದೆ. ಸುಲಿದ ಮೊಟ್ಟೆ ಖರ್ಚಿಗೆ 30 ಪೈಸೆ ಹಾಗೂ ಇಂಧನಕ್ಕೆ 50 ಪೈಸೆ ಸೇರಿ ಒಟ್ಟು 5.20 ಪೈಸೆಯಲ್ಲಿಯೇ ಖರೀದಿಸಬೇಕಿದೆ. ದರ ಏರಿಕೆಯಿಂದ ನಾವುಗಳು ಕೈಯಿಂದ ಹೆಚ್ಚಿನ ಹಣ ವ್ಯಯಮಾಡಬೇಕಿದೆ.

ಇದಲ್ಲದೇ, ಈ ಕಾರ್ಯಕ್ರಮಕ್ಕೆ ಹೆಚ್ಚು ಸಮಯ ನೀಡುವುದರಿಂದ ವಿದ್ಯಾರ್ಥಿಗಳ ಕಲಿಕೆ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ. ಮಕ್ಕಳ ಕಲಿಕೆಗೆ ಇದು ಸಮಸ್ಯೆ ಉಂಟು ಮಾಡುತ್ತಿದೆ. ಈ ಎಲ್ಲ ಅಂಶಗಳನ್ನು ತಾವು ಪರಿಗಣಿಸಿ ಮುಂದಿನ ದಿನಗಳಲ್ಲಿ ಈ ಯೋಜನೆ ಜವಾಬ್ದಾರಿಯನ್ನು ನಮ್ಮಿಂದ ತೆಗೆದು ಸರ್ಕಾರೇತರ ಸಂಸ್ಥೆಗೆ ವಹಿಸಬೇಕೆಂದು ಮನವಿ ಮೂಲಕ ಕೋರಿಕೊಂಡರು.