ಕಾರಟಗಿ: ಆರ್‌ಸಿಬಿ ತಂಡದ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿ ಇತರ ಅಧಿಕಾರಿಗಳ ಅಮಾನತು ಹಿಂಪಡೆಯುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ತಹಸಿಲ್ ಕಚೇರಿ ಸಿಬ್ಬಂದಿಗೆ ಶನಿವಾರ ಮನವಿ ಸಲ್ಲಿಸಿದರು.
ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದಿದೆ. ಆದರೆ, ವಿಜಯೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಆದರೂ, ವಿಜಯೋತ್ಸವ ಆಚರಿಸುವ ನಿರ್ಧಾರ ಕೈಗೊಂಡಿದ್ದು ಯಾರು?. ಕ್ರಿಕೆಟ್ ಅಕಾಡೆಮಿ ಹಾಗೂ ಆರ್‌ಸಿಬಿ ತಂಡದ ಮಾಲೀಕರ ಮೇಲೆ ಕ್ರಮ ವಹಿಸುವುದು ಬಿಟ್ಟು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿರುವುದು ಸರಿಯಲ್ಲ.
ಕಾಲ್ತುಳಿತಕ್ಕೆ 11 ಜನ ಬಲಿಯಾಗಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ಆದರೆ, ಸರ್ಕಾರ ತನಿಖೆ ನಡೆಸಬೇಕಾದ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿದೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಮರಾಮರ್ಶಿಸಬೇಕು. ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಮಹಾಸಭಾದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಹಾಸಭಾದ ಪದಾಧಿಕಾರಿಗಳಾದ ಬೂದಿ ಗಿರಿಯಪ್ಪ, ಶಿವರೆಡ್ಡಿ ವಕೀಲರು, ಗದ್ದೆಪ್ ನಾಯಕ, ಸೋಮನಾಥ್ ಎಚ್. ವಕೀಲರು, ದೇವರಾಜ ನಾಯಕ, ಶೇಖರಪ್ಪ, ಮುಕ್ಕಣ್ಣ, ಹನುಮಂತಪ್ಪ ತೋಳದ, ವೀರನಗೌಡ, ಸೋಮನಾಥ್ ಬೇರ್ಗಿ, ಬಿ.ಮಂಜುನಾಥ ನಾಯಕ, ಹನುಮಂತಪ್ಪ, ಮಂಜುನಾಥ್ ತೊಂಡಿಹಾಳ್, ವೆಂಕಟೇಶ್ ಬೂದಿ, ದೇವರಾಜ ಕಟ್ಟಿಮನಿ, ಮಂಜುನಾಥ್ ಇತರರಿದ್ದರು.