ಕಾರಟಗಿ: ತಾಲೂಕಿನ ನಾಗನಕಲ್ ಬಳಿಯ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರು ಶುದ್ಧೀಕರಣ ಘಟಕಕ್ಕೆ ಶನಿವಾರ ಜಿಪಂ ಸಿಇಒ ವರ್ಣಿತ್ ನೇಗಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿ, ಪಟ್ಟಣ ಸೇರಿ ವಿವಿಧ ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗಬೇಕು. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಜನರಿಗೆ ಶುದ್ಧ ಕುಡಿವ ನೀರು ಸರಬರಾಜು ಮಾಡುವಲ್ಲಿ ಸಮಸ್ಯೆ ಆಗಬಾರದು.
ಘಟಕದಲ್ಲಿನ ಮೋಟಾರ್ ಹಾಗೂ ವಿವಿಧ ಯಂತ್ರಗಳ ತಾಂತ್ರಿಕ ಸಮಸ್ಯೆಗಳಿದ್ದರೆ ಶೀಘ್ರ ಸರಿಪಡಿಸಿಕೊಂಡು ಜಾಗ್ರತೆಯಿಂದ ಕಾರ್ಯ ನಿರ್ವಹಿಸುವಂತೆ ಆರ್‌ಡಬ್ಲುೃಎಸ್ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ಲಕ್ಷ್ಮೀದೇವಿ, ಆರ್‌ಡಬ್ಲುೃಎಸ್ ಇಇ ಮಹೇಶ್ ಶಾಸ್ತ್ರಿ, ಎಇಇ ದೇವಣ್ಣ ಕಟ್ಟಿ, ಶಾಖಾಧಿಕಾರಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.
ಕ್ರಮ ಕೈಗೊಳ್ಳುತ್ತಾ ಆರ್‌ಡಬ್ಲುೃಎಸ್?: ಕಾರಟಗಿ ತಾಲೂಕಿನ ನಾಗನಕಲ್ ಬಳಿಯ ಬಹುಗ್ರಾಮ ಕುಡಿವ ನೀರು ಶುದ್ಧೀಕರಣ ಘಟಕದಲ್ಲಿ ಕೆಲ ತಿಂಗಳಿಂದ ನೀರು ಶುದ್ಧೀಕರಿಸದೇ ಅನೇಕ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು.
ಈ ವಿಷಯವನ್ನು ಮೇ3ರಂದು ನಡೆದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನರು ಸಂಸದ ರಾಜಶೇಖರ ಹಿಟ್ನಾಳ ಗಮನಕ್ಕೆ ತಂದಿದ್ದರು.
ಆಗ ಸಂಸದರು ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಗಂಗಾವತಿಯ ಆರ್‌ಆರ್‌ಡಬ್ಲುೃಎಸ್ ಎಇಇ ದೇವಣ್ಣ ಕಟ್ಟಿಗೆ ಸೂಚಿಸಿದ್ದರು. ಆದರೂ, ಇಲಾಖೆ ಅಧಿಕಾರಿಗಳು ಗಮನ ಹರಿಸಿರಲಿಲ್ಲ.
ಇನ್ನು ಗಂಗಾವತಿಯಲ್ಲಿ ಇದೇ 17 ರಂದು ನಡೆದ ತ್ರಿವಳಿ ತಾಲೂಕುಗಳ ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಫೋಟೊ ತೋರಿಸಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರ್‌ಡಬ್ಲುೃಎಸ್ ಅಧಿಕಾರಿ ದೇವಣ್ಣ ಕಟ್ಟಿ, ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಂತರ ಆರ್‌ಡಬ್ಲುೃಎಸ್ ಇಇ ಮಹೇಶ ಶಾಸ್ತ್ರಿ ಹಾಗೂ ಜಿಪಂ ಸಿಇಒಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ವರದಿ ಒಪ್ಪಿಸಲು ಹಾಗೂ ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದರು.
ಇದರ ಬೆನ್ನಲ್ಲೇ ನೂತನ ಸಿಇಒ ವರ್ಣಿತ್ ನೇಗಿ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದಾರೆ. ಇನ್ನಾದರೂ ನೀರಿನ ಘಟಕದಿಂದ ಜನರಿಗೆ ಶುದ್ಧೀಕರಣಗೊಂಡ ನೀರು ದೊರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.