ಕಾರಟಗಿ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ರೇಖಾ ಚಂದ್ರಶೇಖರ ಆನೆಹೊಸೂರು ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ ಇತರರಿದ್ದರು.  
ಜಿಲ್ಲೆ

ಪಟ್ಟಣದ ಅಭಿವೃದ್ಧಿಗೆ ಪುರಸಭೆ ಸನ್ನದ್ಧ, ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಕಾರಟಗಿ: ಪುರಸಭೆ ಅಧ್ಯಕ್ಷೆ ರೇಖಾ ಚಂದ್ರಶೇಖರ ಆನೆಹೊಸೂರು ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.

ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಮಾತನಾಡಿ, ಪಟ್ಟಣದ ರಸ್ತೆಗಳಲ್ಲಿ ವಾರ್ಡ್ ನಂಬರ್ ಹಾಗೂ ವಾರ್ಡ್ ಸದಸ್ಯರ ಹೆಸರುಗಳುಳ್ಳ ನಾಮಫಲಕ ಅಳವಡಿಸಲಾಗುವುದು. ಜನ ಸಂದಣಿ ಪ್ರದೇಶ, ಸಂತೆ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿ ಇತರೆಡೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಪಟ್ಟಣದ ಅನೇಕ ಸ್ಮಶಾನಗಳನ್ನು ಪುರಸಭೆ ವ್ಯಾಪ್ತಿಗೆ ಪಡೆದು ಅಭಿವೃದ್ಧಿಪಡಿಸಲಾಗುವುದು.

ಅಮೃತ 2.0 ಯೋಜನೆಯಡಿ ಸಿ.ಬಿ.ಎಸ್ ಹಾಗೂ ವಸುಂಧರ ನಗರದಲ್ಲಿ ಉದ್ಯಾವನ ಅಭಿವೃದ್ಧಿ ಪಡಿಸಲಾಗುವುದು. ಪಟ್ಟಣದ ಎಲ್ಲ ಕಡೆಗಳಲ್ಲಿ ಬೀದಿ ದೀಪಗಳ ಅಳವಡಿಕೆಗೆ ಕ್ರಮ ವಹಿಸಲಾಗುವುದು. ಉತ್ತಮ ಗ್ರಂಥಾಲಯ ನಿರ್ಮಾಣಕ್ಕೆ 100 ಬೈ 100 ಜಾಗದ ಅವಶ್ಯಕತೆಯಿದ್ದು, ಹುಡುಕಾಟ ನಡೆದಿದೆ. ರಸ್ತೆಗಳಿಗೆ ಹಂಪ್ಸ್ ಅಳವಡಿಸುವಂತೆ ಪುರಸಭೆಗೆ ಮನವಿ ಬಂದಿದ್ದು, ಟೋಲ್ ಸಿಬ್ಬಂದಿಗೆ ಪತ್ರ ಬರೆಯಲಾಗುವುದು. ಪಟ್ಟಣದ ಹಸಿರೀಕರಣ್ಕಕೆ ಒತ್ತು ನೀಡುವುದು ಸೇರಿ ಇತರ ಕಾಮಗಾರಿ ಕುರಿತು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಪುರಸಭೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಸದಸ್ಯರು ಇದ್ದರು.