ಕಾರಟಗಿ: ರಾಜ್ಯದಲ್ಲಿ ಬಿಜೆಪಿಯವರು ಹೇಳಿದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ, ಜನಪರ ಆಡಳಿತದ ಭಾಗವಾಗಿಯೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಯಲ್ಲಿ ಇದೇ ರೀತಿ ಬರೆಯಿಸಿ ಎಂದು ಹೇಳಬಾರದು. ಎಲ್ಲರು ಮಾಹಿತಿ ಬರೆಯಿಸಲು ಸ್ವತಂತ್ರರಾಗಿದ್ದಾರೆ. ಇದಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ.
ಜಾತಿ ಕಾಲಂನಲ್ಲಿ ಹೆಸರಿಲ್ಲದಿದ್ದರೆ, ಇತರೆ ಕಾಲಂನಲ್ಲೂ ತಮ್ಮ ಮಾಹಿತಿ ದಾಖಲಿಸಬಹುದು. ಬ್ರಾಹ್ಮಣ ಕ್ರಿಶ್ಚಿಯನ್ ಸೇರಿದಂತೆ ಇನ್ನಿತರೆ ಸಮುದಾಯಗಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದು, ಕ್ರಿಶ್ಚಿಯನ್ ಎಂದು ಸೇರಿಸಿದರೆ ಅಂಥವರನ್ನು ಕ್ರಿಶ್ಚಿಯನ್ ಎಂತಲೇ ಗುರುತಿಸಲಾಗುತ್ತದೆ. ಸಮೀಕ್ಷೆಯಲ್ಲಿ ಬಿಜೆಪಿಯವರು ಹೇಳಿದಂತೆ ಬರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಹಿಂದು ಧರ್ಮವನ್ನು ಬಿಜೆಪಿ ನಾಯಕರು ಪೇಟೆಂಟ್ ತೆಗೆದುಕೊಂಡವರಂತೆ ಆಡುತ್ತಿದ್ದಾರೆ. ತಮ್ಮ ಮಕ್ಕಳನ್ನು ಗಣೇಶೋತ್ಸವದ ಡಿಜೆಯಲ್ಲಿ ಕುಣಿಯಲು, ರಸ್ತೆಗಿಳಿದು ಹೋರಾಟ ಮಾಡಲೂ ಕಳಿಸದೇ ವಿದೇಶದಲ್ಲಿ ಓದಿಸುತ್ತಾರೆ. ಆದರೆ, ಹಿಂದು ಧರ್ಮಕ್ಕೆ ಸೇರಿದ ಬಡವರ ಮಕ್ಕಳನ್ನು ಪ್ರಚೋದಿಸಿ ಬಾವಿಗೆ ತಳ್ಳುತ್ತಿದ್ದಾರೆ ಎಂದರು.
ಪಾಕ್ ಪರ ಯಾರೇ ಘೋಷಣೆ ಕೂಗಿದರೂ, ಒದ್ದು ಒಳಗೆ ಹಾಕುತ್ತೇವೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು, ಸ್ವಾತಂತ್ರ್ಯ ತಂದುಕೊಟ್ಟಿದ್ದು, ರಾಷ್ಟ್ರಗೀತೆ ಹಾಡಿರುವುದು, ಜೈ ಜವಾನ್ ಜೈ ಕಿಸಾನ್ ಸಿದ್ಧಾಂತ, ರಾಷ್ಟ್ರಧ್ವಜ ರಚನೆ ಮಾಡಿದ್ದು ಸೇರಿ ಬೋಲೋ ಭಾರತ ಮಾತಾ ಕೀ ಜೈ ಎಂದು ಹೇಳಿದ್ದು ನಾವು. ಬಿಜೆಪಿಯವರಿಂದ ದೇಶದ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ, ಮೊದಲು ಬಿಜೆಪಿಯವರನ್ನೇ ಗಡೀಪಾರು ಮಾಡಬೇಕಿದೆ ಎಂದರು.