ಜಿಲ್ಲೆ

ಕಂದಾಯ ಗ್ರಾಮಗಳಾಗಿಸಲು ಕ್ರಮ

ಕಾರಟಗಿ: ಕಂದಾಯ ಗ್ರಾಮಗಳಾದರೆ ಮಾತ್ರ ಸರ್ಕಾರದ ಎಲ್ಲ ಯೋಜನೆಗಳು ಜನರಿಗೆ ತಲುಪಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಮುಸ್ಟೂರು-ಡಗ್ಗಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲ ಕ್ಯಾಂಪ್‌ಗಳನ್ನು ಶೀಘ್ರವೇ ಕಂದಾಯ ಗ್ರಾಮಗಳನ್ನಾಗಿ ಮಾರ್ಪಡಿಸಿ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು. ಸರ್ಕಾರ ಬಡವರ ಪರವಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮುಸ್ಟೂರು ಗ್ರಾಮದಿಂದ-ಮುಸ್ಟೂರು ಡಗ್ಗಿ, ಮುಸ್ಟೂರು-ಹೆಬ್ಬಾಳವರೆಗೆ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ಮುಸ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ನಿರ್ಮಾಣ, ಹೆಬ್ಬಾಳ-ಹೆಬ್ಬಾಳ ಕ್ಯಾಂಪ್ ರಸ್ತೆ ನಿರ್ಮಾಣ, ಢಣಾಪುರ ಗ್ರಾಮದಿಂದ ರಾಯಚೂರು-ಗಂಗಾವತಿ ರಸ್ತೆಯವರೆಗೆ ರಸ್ತೆ ನಿರ್ಮಾಣಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಕಾನೂನು ತೊಡಕು ಶೀಘ್ರ ಇತ್ಯರ್ಥ

ಮುಸ್ಟೂರು ವ್ಯಾಪ್ತಿಯ ಮೂಸ್ಟೂರು-ಡಗ್ಗಿ ಸರ್ವೇ ನಂ.207 ಹಾಗೂ 210/1ರಲ್ಲಿ ದಶಕಗಳಿಂದ ವಾಸವಿದ್ದ 67 ಜನ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು. ಆದರೆ, ಇದೇ ಮುಸ್ಟೂರು-ಡಗ್ಗಿ ವ್ಯಾಪ್ತಿಯ ಸರ್ವೇ ನಂ.206/1 ರಲ್ಲಿ 56 ಕುಟುಂಬಗಳು ಅನೇಕ ದಶಕಗಳಿಂದ ವಾಸವಾಗಿವೆ. ಆದರೆ ಈ ಸರ್ವೇ ನಂ.ನಲ್ಲಿ 1999-2000ನೇ ವರ್ಷದಲ್ಲಿ ಅಂದಿನ ಅಧಿಕಾರಿಗಳು ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸುವ ಬದಲು ಪಹಣಿಯಲ್ಲಿ ಅರಣ್ಯ ಎಂದು ನಮೂದು ಮಾಡಿದ್ದರಿಂದ ಸಮಸ್ಯೆಯಾಗಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಮಾತನಾಡಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಿ ಕೆಲ ತಿಂಗಳಲ್ಲೇ ಇಲ್ಲಿನ ಜನರಿಗೂ ಹಕ್ಕುಪತ್ರ ವಿತರಿಸುವುದಾಗಿ ಭರವಸೆ ನೀಡಿದರು.