ಜಿಲ್ಲೆ

ಕಾರಟಗಿಯಲ್ಲಿ ಎತ್ತಿನ ಬಂಡಿಯಲ್ಲಿ ಬಂದು ಬೃಹತ್ ಪ್ರತಿಭಟನೆ ನಡೆಸಿದ ಅನ್ನದಾತರು

ಕಾರಟಗಿ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಸಣ್ಣ ಹಿಡುವಳಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಬದುಕು ಬೀದಿಗೆ ಬರಲಿದೆ. ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ಹೆಚ್ಚಾಗಲಿದೆ. ರೈತಾಪಿ ಸಂಸ್ಕೃತಿ ಮಾಯವಾಗಿ ಬಂಡವಾಳ ಶಾಹಿಗಳ ಸಂಸ್ಕೃತಿ ಬೆಳೆಯಲಿದೆ. ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟು ಬೀಳುವ ಜತೆಗೆ ಆಹಾರ ಭದ್ರತೆ ಹಕ್ಕು ನಾಶವಾಗುತ್ತದೆ. ಬಂಡವಾಳ ಶಾಹಿಗಳು ಕುಲಾಂತರಿ ಬೀಜಗಳ ಬಳಕೆ, ರಾಸಾಯಿನಿಕ ಕೃಷಿಗೆ ಒತ್ತು ನೀಡುವುದರಿಂದ ಪರಿಸರ ನಾಶವಾಗುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕಾರ್ಪೋರೆಟ್ ಕಂಪನಿಗಳ ಹಿಡಿತ ಹೆಚ್ಚುತ್ತದೆ.

ವಿದ್ಯುತ್ ಖಾಸಗೀಕರಣದಿಂದ ರೈತರ ಬದುಕು ಬೀದಿಪಾಲಾಗಲಿದೆ. ಸರ್ಕಾರ ಈವರೆಗೆ ನೀಡುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯ ಮಾಯವಾಗಲಿದೆ. ರೈತರ ಅಭಿವೃದ್ಧಿಗೆ ಶ್ರಮಿಸಬೇಕಾದ ಸರ್ಕಾರ, ರೈತರಿಗೆ ಉರುಳು ತರಲು ಹೊರಟಿರುವುದು ದುರಂತ. ಮಾರಕವಾದ ಕಾನೂನುಗಳಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಲಿದ್ದು, ಸರ್ಕಾರ ಈ ಎರಡು ಕಾಯ್ದೆಗೆ ತಿದ್ದುಪಡೆ ತರದಂತೆ ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಕವಿತಾ ಆರ್.ಗೆ ಮನವಿ ಸಲ್ಲಿಸಿದರು.

ರೈತ ಸಂಘಧ ತಾಲೂಕು ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ, ಪದಾಧಿಕಾರಿಗಳಾದ ದಶರಥ ರಡ್ಡಿ, ಭೀಮಪ್ಪ, ಪಿ. ರಮೇಶ್, ಆನಂದ, ತಿರುಪತೆಪ್ಪ, ಮಲ್ಲೇಶಪ್ಪ, ಈರಣ್ಣ, ದೇವರಾಜ ಬಿ., ಸುಂದರರಾಜ್, ಅಟೆಲ್ ಬಾಷಾ, ಕೆ. ಜಗದೀಶ್, ಮುಖಂಡರಾದ ವೆಂಕಟೇಶ್ ತಂಗಡಗಿ, ಶರಣೇಗೌಡ ಬೂದಗುಂಪಾ, ಉಮೇಶ್ ಭಂಗಿ, ಎಚ್. ಈಶಪ್ಪ, ದಾನನಗೌಡ ಪನ್ನಾಪುರ ಸೇರಿ ಇತರರಿದ್ದರು.

ಕಾರಟಗಿ ಸಂಪೂರ್ಣ ಬಂದ್: ರೈತ ಸಂಘ ಕರೆ ನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿತು. ರೈತ ಸಂಘದ ಜತೆಗೆ ವಿವಿಧ ಸಂಘಟನೆಗಳು ಸಹ ಸಾಥ್ ನೀಡಿದವು. ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳ ಮಾಲೀಕರು, ಬೀದಿ ಬದಿಯ ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬೆಂಬಲ ಸೂಚಿಸಿದರು. ಪಟ್ಟಣದ ಪುರಸಭೆಯಿಂದ ಎಪಿಎಂಸಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಎತ್ತಿನ ಬಂಡಿಗಳನ್ನು ಕಟ್ಟಿ, ಹಸಿರು ಶಾಲು ತೊಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.