ಕಾರಟಗಿ: ತಹಸಿಲ್ ಕಚೇರಿಯಲ್ಲಿನ ಅಕ್ರಮಗಳು ನನ್ನ ಅಧಿಕಾರವಧಿಯಲ್ಲಿ ನಡೆದಿಲ್ಲ. ಈ ಹಿಂದೆ ಪುಣ್ಯಾತ್ಮ ತಿಳಿದಂತೆ ಅಧಿಕಾರ ನಡೆಸಿದ್ದರಿಂದ ಇಂತಹ ಅನಾಹುತಗಳು ಸಂಭವಿಸಿದ್ದು ನಾನು ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಶಿವರಾಜ ತಂಗಡಗಿ ಮಾಜಿ ಶಾಸಕ ಬಸವರಾಜ ದಢೇಸುಗೂರು ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಹಸಿಲ್ ಕಚೇರಿಯಲ್ಲಿ ದಾಖಲೆಗಳ ಗೋಲ್‌ಮಾಲ್ ಬಗ್ಗೆ ಇತ್ತೀಚೆಗೆ ಸಂಪೂರ್ಣ ಮಾಹಿತಿ ತಪಡೆದುಕೊಂಡಿದ್ದೇನೆ. ಇವಾವು ನನ್ನ ಅಧಿಕಾರವಧಿಯಲ್ಲಿ ನಡೆದಿಲ್ಲ. ಈ ಹಿಂದೆ ಪುಣ್ಯಾತ್ಮ ತಿಳಿದಂತೆ ಅಧಿಕಾರ ನಡೆಸಿದ್ದರಿಂದ ಹಲವು ಪ್ರಕರಣಗಳು ಈಗ ಹೊರಬರುತ್ತಿವೆ.
ಇನ್ನು ಏನೇನು ಅನಾಹುತಗಳು ನಡೆದಿವೆ ಎನ್ನುವುದನ್ನು ಪರಿಶೀಲಿಸಬೇಕಿದೆ. ರೈತರ ದಾಖಲೆಗಳನ್ನು ತಿದ್ದುಪಡಿ ಮಾಡಿ ಅವರ ನಡುವೆ ಕಲಹ ಸೃಷ್ಟಿಸಿರುವುದು ತಿಳಿದು ಬಂದಿದೆ. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಅನೇಕ ಬಾರಿ ಚರ್ಚಿಸಿದ್ದೇನೆ. ಅಧಿಕಾರಿಗಳ ತಂಡ ರಚಿಸಿ ಸಮಗ್ರ ತನಿಖೆ ನಡೆಸಲಾಗುವುದು.
ತಪ್ಪಿತಸ್ಥರು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಿದ್ದರೂ ಕಡ್ಡಾಯವಾಗಿ ಶಿಕ್ಷೆ ಆಗುತ್ತದೆ. ಕಚೇರಿಯಲ್ಲಿನ ಅಕ್ರಮವನ್ನು ಸ್ವಚ್ಛಗೊಳಿಸುವ ಜತೆಗೆ ರೈತರ ಹಿತಕಾಪಾಡಲು ಸದಾ ಬದ್ಧ ಎಂದು ಹೇಳಿದರು. ಕೆಲ ದಿನಗಳ ಹಿಂದೆ ತಹಸಿಲ್ ಕಚೇರಿಯಲ್ಲಿ ದಾಖಲೆಗಳ ಗೋಲ್‌ಮಾಲ್ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವಾಡಿಕೆಯಂತೆ ಮಳೆ ಆಗದಿದ್ದರಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿಲ್ಲ. ಪ್ರಸ್ತುತ 5 ಟಿಎಂಸಿ ಅಡಿ ನೀರು ಕೊರತೆಯಿಂದಾಗಿ ರೈತರ ಬೆಳೆ ರಕ್ಷಣೆ ಹಾಗೂ ಕುಡಿವ ನೀರು ಪೂರೈಕೆಗೆ ಚಿಂತನೆ ನಡೆದಿದೆ. ಕೆಲವರು ಜಲಾಶಯದಿಂದ ಕಾರ್ಖಾನೆಗಳಿಗೆ ನೀರು ಅಕ್ರಮವಾಗಿ ಪೂರೈಸುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ರೈತರು ಇದಾವುದಕ್ಕೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗುವುದು ಬೇಡ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ನ.30ರವರೆಗೆ ನಿತ್ಯ ಕಾಲುವೆಗೆ 4100 ಕ್ಯೂಸೆಕ್ ನೀರು ಪೂರೈಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.