ಕಾರಟಗಿ: ಝರಿಯಾಗಿ ಹುಟ್ಟಿ, ನದಿಯಾಗಿ ಹರಿದು ಸಾಗರ ಸೇರುವ ಹಾಗೆ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ತರ ಸ್ಥಾನವಿದೆ ಎಂದು ತಲೇಖಾನಮಠದ ವೀರಭದ್ರ ಶರಣರು ಹೇಳಿದರು.
ತಾಲೂಕಿನ ಬೂದುಗುಂಪಾ ಕಲ್ಯಾಣ ಕೃಷಿ ತೋಟದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಪದಗ್ರಹಣ, ಕವಿಗೋಷ್ಠಿ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರು, ದಾಸರ ನಂತರ ಸರ್ವಜ್ಞ ಹಾಗೂ ಆಧುನಿಕ ಕಾಲದಲ್ಲಿ ದಿನಕರ ದೇಸಾಯಿ, ಸಿ.ಪಿ.ಕೆ, ದುಂಡಿರಾಜ್, ಚಿದಾನಂದ ಸಾಲಿ, ಅಕ್ಬರ್ ಅಲಿ ಅವರು ಚುಟುಕು ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯ ಗಟ್ಟಿಗೊಳಿಸಿದ್ದಾರೆ ಎಂದರು.
20ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ಚು.ಸಾ.ಪ. ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ತಾಲೂಕು ಅಧ್ಯಕ್ಷ ಕರಿಸಿದ್ದನಗೌಡ ಮಾಲಿಪಾಟೀಲ್, ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ, ನಿಕಟಪೂರ್ವ ತಾಲೂಕಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಚ್.ಬಸಪ್ಪ ಸೋಮನಾಳ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ ಕೋಲ್ಕಾರ್, ಶಿಕ್ಷಕರಾದ ಮಲ್ಲಿಕಾರ್ಜುನ ಹೊಸಮನಿ, ಅನ್ನಪೂರ್ಣಾ ಸಜ್ಜನ, ಸಾಮಾಜಿಕ ಕಾರ್ಯಕರ್ತೆ ವೀರಮ್ಮ ಪಲ್ಲೇದ ಇದ್ದರು.