ಕಾರಟಗಿ: ಜೀವನದಲ್ಲಿ ಹಣ, ಅಧಿಕಾರ ಹಾಗೂ ಅಂತಸ್ತಿಗಿಂತ ನೆಮ್ಮದಿ ಹಾಗೂ ಸಂತೋಷ ಮುಖ್ಯ ಎಂದು ಶ್ರೀಧರಗಡ್ಡೆ ವಿರಕ್ತ ಮಠದ ಮರಿಕೊಟ್ಟೂರು ದೇಶಿಕರು ಹೇಳಿದರು.
ತಾಲೂಕಿನ ಬೂದಗುಂಪಾದ ಕೊಟ್ಟೂರೇಶ್ವರ ಶಾಖಾ ವಿರಕ್ತ ಮಠದಲ್ಲಿ ಸಿದ್ದೇಶ್ವರ ದೇಶಿಕರ ಮಹಾ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಎಡೆಯೂರು ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಿಮಿತ್ತ ಸೋಮವಾರ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇತರರಿಗೆ ಕೆಡಕು ಮಾಡದಂತೆ ಬದುಕಬೇಕು ಎಂದು ಶರಣರು ಹೇಳಿದ್ದಾರೆ. ಅವರ ವಿಚಾರಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು. ಬಾಳಿನಲ್ಲಿ ನಾವೆಲ್ಲರೂ ಮಹಾತ್ಮರು ಹಾಗೂ ಶರಣರ ವಿಚಾರಧಾರೆಗಳನ್ನು ಅಳವಡಿಸಕೊಳ್ಳಬೇಕು ಎಂದರು.
ಈಗಾಗಲೇ ಪುರಾಣ ಆರಂಭವಾಗಿದ್ದು, ಫೆ.10 ರವರೆಗೆ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಗೆ ಪುರಾಣ ಜರುಗಲಿದೆ. ನಿಡಗುಂದಿಯ ಸಿದ್ದಲಿಂಗಯ್ಯ ಶಾಸ್ತ್ರೀಗಳು ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಸೋಮನಾಳದ ಶರಣ ಕುಮಾರ ಗವಾಯಿಗಳು ಸಂಗೀತ ಹಾಗೂ ನವಲಿಯ ಸಂಗೀತ ಶಿಕ್ಷಕ ವೀರೇಶ ಕುಮಾರ ತಬಲ ವಾದನ ಮಾಡಲಿದ್ದಾರೆ ಎಂದರು.
ಸೋಮಸಮುದ್ರ ವಿರಕ್ತ ಮಠದ ಸಿದ್ದಲಿಂಗ ದೇಶಿಕರು ಹಾಗೂ ಸಂಗನಾಳದ ವಿಶ್ವೇಶ್ವರ ದೇವರು, ಭಕ್ತರಾದ ಶರಣೇಗೌಡ ಪಾಟೀಲ್, ಯರಕಲ್ ಗುರುಸಿದ್ದಪ್ಪ, ಸೊಸೈಟಿ ಶರಣೇಗೌಡ, ಸೋಮಶೇಖರ ಕೋಲ್ಕಾರ್, ಮಲ್ಲನಗೌಡ, ಪರಮೇಶಪ್ಪ, ಭರತೇಶ್, ವೀರನಗೌಡ, ಮೌನೇಶ್, ಶಿವಕುಮಾರ ಬಜಾರ್, ಅಂಬಣ್ಣ ಹರಿಜನ ಇತರರಿದ್ದರು.