ಕಾರಟಗಿಯಲ್ಲಿ ಕಸಾಪ ತಾಲೂಕು ಘಟಕದಿಂದ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು. ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ, ಪ್ರಮುಖರಾದ ಸೋಮನಾಥ ಹೆಬ್ಬಡದ, ಹನುಮಂತಪ್ಪ ತೊಂಡಿಹಾಳ, ವಿಜಯಲಕ್ಷ್ಮೀ ಮೇಲಿನಮನಿ ಇದ್ದರು. 
ಜಿಲ್ಲೆ

ದೇಶದ ಸಾಹಿತ್ಯ ಲೋಕದ ನಡುವೆ ಕೊಂಡಿ

ಕಾರಟಗಿ: ಡಾ.ಎಸ್.ಎಲ್ ಭೈರಪ್ಪನವರ ಕೃತಿಗಳು ಬದುಕಿನ ಸೂಕ್ಷ್ಮತೆ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸಿದವು ಎಂದು ನ್ಯಾಯವಾದಿ ಸೋಮನಾಥ ಹೆಬ್ಬಡದ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪಿಯು ಕಾಲೇಜು ಆವರಣದಲ್ಲಿ ಕಸಾಪ ತಾಲೂಕು ಘಟಕದಿಂದ ಬುಧವಾರ ಸಂಜೆ ಆಯೋಜಿಸಿದ್ದ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಭೈರಪ್ಪ ಅವರು ಸಾಹಿತ್ಯ ಮಾತ್ರವಲ್ಲದೇ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಬೌದ್ಧಿಕ ವಿಚಾರಣಾ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಕಾದಂಬರಿಗಳಿಂದ ಬೃಹತ್ ಓದುವ ವರ್ಗವನ್ನೇ ಸೃಷ್ಟಿಸಿಕೊಂಡಿದ್ದರು. ಬರಹ, ನಡೆ, ನುಡಿ ಸಾಹಿತ್ಯ ಲೋಕದಲ್ಲಿ ಸದಾ ಚರ್ಚೆಗೆ ಒಳಗಾಗಿದೆ. ನಂಬಿದ ಮೌಲ್ಯಗಳನ್ನು ಕಾಪಿಟ್ಟುಕೊಂಡು ಬರಹದಲ್ಲಿ ಮೂಡಿಸಿದ ಶೈಲಿ ಇತರರಿಗೆ ಪ್ರೇರಣೆಯಾಗಿದೆ. ಕೃತಿಗಳ ಮೂಲಕ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕಸ್ತರಕ್ಕೆ ಕೊಂಡೊಯ್ಯುದರು. ಕನ್ನಡ ಹಾಗೂ ದೇಶದ ಸಾಹಿತ್ಯ ಲೋಕದ ನಡುವೆ ಕೊಂಡಿಯಾದರು ಎಂದರು.

ಇದನ್ನೂ ಓದಿ:

ಇನ್ನು ಗೃಹಭಂಗ ಹದಿನಾಲ್ಕು ಭಾರತೀಯ ಭಾಷೆಗಳಿಗೆ, ಪರ್ವ ಆರು ಭಾಷೆಗಳಿಗೆ ಮತ್ತು ಸಾರ್ಥ ಸಂಸ್ಕೃತ ಸೇರಿದಂತೆ ನಾಲ್ಕು ಭಾಷೆಗಳಿಗೆ ಅನುವಾದಗೊಂಡಿದ್ದು ಅವರ ಬರವಣಿಗೆಯ ಮೌಲಿಕತೆಯನ್ನು ಸಾರುತ್ತವೆ. ಈ ಕೃತಿಗಳು ಭಾರತೀಯ ಸಂಸ್ಕೃತಿ, ಮಾನವ ಸಂಬಂಧಗಳು ಮತ್ತು ದಾರ್ಶನಿಕ ಚಿಂತನೆಗಳನ್ನು ಆಳವಾಗಿ ಚಿತ್ರಿಸುವ ಮೂಲಕ ಓದುಗರ ಮನಸ್ಸಿನಲ್ಲಿ ಶಾಶ್ವತವಾದ ಗುರುತು ಮೂಡಿಸಿವೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಕಸಾಪ ಕನಕಗಿರಿ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ‌್ಯಾವಳದ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಪ್ರಮುಖರಾದ ಮಂಜುನಾಥ್ ಮಸ್ಕಿ, ಸಿಆರ್‌ಪಿ ಎನ್.ಮಾರುತಿ ಮಾತನಾಡಿದರು.

ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ, ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಸದಸ್ಯ ವೆಂಕೋಬ ಪತ್ತಾರ, ಜಿಲ್ಲಾ ಘಟಕದ ನಿಕಟಪೂರ್ವ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಮೇಲಿನಮನಿ, ಮುಖ್ಯ ಶಿಕ್ಷಕರಾದ ರಮೇಶ ಕುಕನೂರು, ಅಮರೇಶ ಪಾಟೀಲ್, ವಿದ್ಯಾಧರಗೌಡ ಇತರರಿದ್ದರು.