ಜಿಲ್ಲೆ

ಕರಸೇವಕರ ಹೋರಾಟಕ್ಕೆ ಸಿಕ್ಕ ಪ್ರತಿಫಲ

ತುಮಕೂರು: ಕರಸೇವಕರ ಹೋರಾಟದಿಂದ ವಿವಾದಿತ ಕಟ್ಟಡ ನೆಲಸಮವಾದ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಿಸಿ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ಮಾಡಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾಕರಾದ ನಾ.ತಿಪ್ಪೇಸ್ವಾಮಿ ಹೇಳಿದರು.

ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಮಂಟಪದಲ್ಲಿ ಸೋಮವಾರ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಕರಸೇವಕರ ಮಿಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮಜನ್ಮಭೂಮಿ ಅಯೋಧ್ಯೆಯ ವಿವಾದಿತ ಕಟ್ಟಡದ ಬಳಿ 1992ರಲ್ಲಿ ಸರಯೂ ನದಿಯಿಂದ ಮರಳನ್ನು ಹೊತ್ತು ಸಂಗ್ರಹಿಸುವುದಷ್ಟೇ ಕರಸೇವೆಯ ಮುಖ್ಯಉದ್ದೇಶವಾಗಿತ್ತು. ದೇಶದೆಲ್ಲಡೆಯಿಂದ ಬಂದಿದ್ದ ಕರಸೇವಕರು ಅಪಶಕುನವಾಗಿದ್ದ ವಿವಾದಿತ ಕಟ್ಟಡವನ್ನು ನೆಲಸಮ ಮಾಡಿದ್ದು 31 ವರ್ಷಗಳು ಸಂದಿವೆ ಎಂದರು.

ವಿವಾದಿತ ಕಟ್ಟಡ ನೆಲಸಮಗೊಂಡ ಸ್ಥಳದಲ್ಲೇ ರಾಮಲ್ಲಲ್ಲಾನಿಗೆ ತಾತ್ಕಾಲಿಕವಾಗಿ ದೇವಾಲಯವನ್ನೂ ಕಟ್ಟುವಲ್ಲಿ ಕರಸೇವಕರು ಯಶಸ್ವಿಯಾಗಿದ್ದರು. ಆ ಜಾಗದಲ್ಲೇ ಇವತ್ತು ಭವ್ಯ ರಾಮಮಂದಿರ ತಲೆಎತ್ತಿದ್ದು ಐದುನೂರು ವರ್ಷಗಳ ಸಂಘಷಕ್ಕೆ ತೆರೆಬಿದ್ದಂತಾಗಿದೆ. ಅಂದು ಪ್ರಾಣವನ್ನು ಲೆಕ್ಕಿಸದೇ ಕರಸೇವಕರು ಹೋರಾಡಿದ್ದ ಫಲ ನಾವು ಕಾಣುತ್ತಿದ್ದೇವೆ ಎಂದರು.

ನನ ್ನ ಭಾರತ ನನ್ನ ಶ್ರೇಷ್ಠ ಭಾರತವಾಗಿ ಮೂಡಿಬರಬೇಕು ಎಂದು ಅಯೋಧ್ಯೆಯಲ್ಲಿ 1992ರಲ್ಲಿ 6 ದಿನ ಭಾಗವಹಿಸಿ ಭಜನೆಯೊಂದಿಗೆ ಭಾರತಮಾತೆಗೆ ಅಭಿಮಾನ ಕೊಡುವ ಸ್ವಾಭಿಮಾನದ ನಿರ್ಮಾಣ ಅಂದು ಕರಸೇವಕರಿಂದ ಆಯಿತು. ಸಾಂಸ್ಕೃತಿಕ ಭಾರತದ ಪುನರುತ್ಥಾನಕ್ಕೆ ನಡೆದ ಹೋರಾಟ ಕರಸೇವೆ ಎಂದರು.

31 ವರ್ಷಗಳ ಹಿಂದೆ ಜೀವದಹಂಗು ತೊರೆದು ಕರಸೇವಕರು ಅಯೋಧ್ಯೆಯಲ್ಲಿ ಹೋರಾಟ ನಡೆಸಿದ್ದ ಜಾಗದಲ್ಲಿ ರಾಮಮಂದಿರ ತಲೆ ಎತ್ತಿರುವುದು ನಮ್ಮ ಹೋರಾಟದ ಪ್ರತಿರೂಪ ಎನಿಸಿದೆ. ಎಲ್ಲರೂ ಇನ್ನೂ ರಾಮರಾಜ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರಸೇವಕ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

ಹಿರಿಯ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ಡಾ.ಎಸ್.ಪರಮೇಶ್, ಎಚ್.ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.

ಕರಸೇವಕರಿಗೆ ಗೌರವ ಸಮರ್ಪಣೆ ಈ ಸಂದರ್ಭದಲ್ಲಿ ಕರಸೇವಕರಾದ ಟಿ.ಎನ್.ಮಹಲಿಂಗಪ್ಪ, ಟಿ.ಎಸ್.ಸದಾಶಿವಯ್ಯ, ಟಿ.ಸಿ.ಶಿವಶಂಕರ್, ಕಾಂಡಿಮೆಂಟ್ ಶಿವಣ್ಣ, ಕೆ.ಪಿ.ಮಹೇಶ್, ಮುನಿರಾಮಯ್ಯ, ಬಿ.ಹೆಚ್.ಮುನಿರಾಮಯ್ಯ, ಕಾಂತರಾಜು ತಿಪ್ಪೇಸ್ವಾಮಿ. ಸೊಗಡು ಶಿವಣ್ಣ, ಶಿವಪ್ರಕಾಶ್, ಶಿವಕುಮಾರಸ್ವಾಮಿ, ಟಿ.ಜಿ.ದೇವರಾಜು, ಎಲ್‌ಐಸಿ ನಾಗಭೂಷಣ್, ಚಿ.ನಾ.ಹಳ್ಳಿ ಸಿದ್ದರಾಮಯ್ಯ, ಡಾ.ಚಂದ್ರಶೇಖರ್, ರಂಗಾನಾಯ್ಕ, ಬಾಬುರಾಜೇಂಧ್ರ ಪ್ರಸಾದ್ ಅವರ ಪತ್ನಿ ಸುನಂದ, ಟಿ.ಮಹೇಶ್ ಅವರ ಪತ್ನಿ ವಿಜಯಲಕ್ಷ್ಮಿ, ಉದಯಕುಮಾರ್ ಅವರ ಪತ್ನಿ ಗಾಯತ್ರಿ, ಪ್ರಭುಸ್ವಾಮಿ. ತಿಪಟೂರಿನ ಪ್ರಸನ್ನಕುಮಾರ್ ಅವರನ್ನು ಗೌರವಿಸಲಾಯಿತು.
ಗಂಗಾಜಲ ಹೊತ್ತ ಸೊಗಡು ತ್ರೇತಾಯುಗದಲ್ಲಿ ರಾಮ-ಸೀತೆ ತಂಗಿದ್ದ ಕುರುಹುಗಳು ದೇವರಾಯನ ದುರ್ಗದ ದಟ್ಟಡವಿಯ ನಾಮದಚಿಲುಮೆಯಲ್ಲಿದ್ದು ಅಲ್ಲಿಂದ ಸಂಗ್ರಹಿಸಿ ತರಲಾಗಿದ್ದ ಪವಿತ್ರ ಜಲವನ್ನು ಶ್ರೀರಾಮನ ತೀರ್ಥದ ರೂಪವಾಗಿ ಎಲ್ಲರಿಗೂ ನೀಡಲಾಯಿತು. ಇದಕ್ಕು ಮುನ್ನ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಪವಿತ್ರ ಗಂಗಾಜಲವನ್ನು ಕುಂಭಗಳಲ್ಲಿ ಹೊತ್ತು ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಇದೇ ವೇಳೆ ಕರಸೇವಕ ಕಾಂಡಿಮೆಂಟ್ ಶಿವಣ್ಣ 1992ರಲ್ಲಿ ಅಯೋಧ್ಯೆಯಿಂದ ತಂದಿದ್ದು ಮನೆಯಲ್ಲಿಟ್ಟು ಪೂಜಿಸುತ್ತಿರುವ ಇಟ್ಟಿಗೆಗಳನ್ನು ಸಹ ಪೂಜಿಸಲಾಯಿತು.