ಜಿಲ್ಲೆ

ಹ್ಯಾಟ್ರಿಕ್ ಹೀರೋ ಶಿವಣ್ಣ, ದೀನಬಂಧು ಸಂಸ್ಥೆಯ ಜಿ.ಎಸ್.ಜಯದೇವ್‌ಗೆ ಪ್ರಶಸ್ತಿ: ಅ.22ರಂದು ಗಣ್ಯರಿಂದ ಪ್ರದಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಹಿರಿಯ ಸ್ವಾತಂತ್ರೃ ಹೋರಾಟಗಾರ ಡಿ.ಕರಡೀಗೌಡ ಹೆಸರಿನಲ್ಲಿ ಕೊಡಮಾಡುವ ‘ಕಲಾಕೌಸ್ತುಭ ಪ್ರಶಸ್ತಿ’ಗೆ ನಟ ಡಾ.ಶಿವರಾಜ್‌ಕುಮಾರ್ ಹಾಗೂ ‘ಸಮಾಜ ಸೇವಾರತ್ನ ಪ್ರಶಸ್ತಿ’ಗೆ ಚಾಮರಾಜನಗರದ ದೀನಬಂಧು ಮಕ್ಕಳ ಮನೆ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್ ಆಯ್ಕೆಯಾಗಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕರಡೀಗೌಡ ಪ್ರತಿಷ್ಠಾನ ಹಾಗೂ ಮಾನಸ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿ.ಕೆ.ಜಗದೀಶ, ಮದ್ದೂರು ತಾಲೂಕು ವಳಗೆರೆಹಳ್ಳಿಯ ಎಸ್.ಡಿ.ಜಯರಾಂ ಕ್ರೀಡಾಂಗಣದಲ್ಲಿ ಹೊಂಬಾಳಮ್ಮ ಡಿ.ಕರಡೀಗೌಡ ವೇದಿಕೆಯಲ್ಲಿ ಅ.22ರಂದು ಆಯೋಜಿಸಿರುವ ಸಮಾರಂಭದಲ್ಲಿ ಇಬ್ಬರಿಗೆ ತಲಾ 50 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಡಿ.ಕರಡೀಗೌಡ ಪ್ರತಿಷ್ಠಾನ ಹಾಗೂ ಮಾನಸ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಬೆಳಗ್ಗೆ 10ಗಂಟೆಗೆ ಆಯೋಜಿಸಿರುವ ಸಮಾರಂಭವನ್ನು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಚಿತ್ರ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಭಾಗವಹಿಸಲಿದ್ದು, ಶಾಲಾ ಕಟ್ಟಡ ಶಂಕುಸ್ಥಾಪನೆಯನ್ನು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಅಭಿನಂದನಾ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು ಮತ್ತು ಸದಸ್ಯ ಎಂ.ಎನ್.ಮಧುಸೂದನ್, ಸಂಸ್ಕೃತಿಕ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಪಾಲ್ಗೊಳ್ಳಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ವಿ.ಕೆ.ಜಗದೀಶ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತೆಯೇ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯುವ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ ಪ್ರೋತ್ಸಾಹಧನ ನೀಡಲಾಗುವುದು ಎಂದು ವಿವರಿಸಿದರು.

ಮಾನಸ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಬಿ.ನಾಗರಾಜು, ಸಂಸ್ಥೆಯ ಪ್ರಾಂಶುಪಾಲ ಪ್ರವೀಣ್‌ಕುಮಾರ್ ಇದ್ದರು.