ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಶಿಶುಗಳ ಮರಣ ಸಂಖ್ಯೆಯನ್ನು ತಗ್ಗಿಸಲು ಮಕ್ಕಳ ತಜ್ಞ ವೈದ್ಯರು ಸಂಕಲ್ಪ ಮಾಡುವುದರೊಂದಿಗೆ ತೊಗರಿ ನಾಡು ಕಲಬುರಗಿಯ ಹೈಕ ಶಿಕ್ಷಣ ಸಂಸ್ಥೆಯ ಪಿಡಿಎ ಕಾಲೇಜು ಸಭಾಂಗಣದಲ್ಲಿ ಮೂರು ದಿನಗಳ ಕಾಲ ಜರುಗಿದ ಕರ್ನಾಟಕ ರಾಜ್ಯ ಮಕ್ಕಳ ತಜ್ಞ ವೈದ್ಯರ ೪೨ನೇ ಸಮ್ಮೇಳನ (ಕರ್‌ಪೆಡಿಕಾನ್-೨೦೨೩)ಕ್ಕೆ ಅದ್ಧೂರಿ ತೆರೆ ಬಿದ್ದಿತು.
ಕಲಬುರಗಿಯವರು ನೀಡಿದ ಆತಿಥ್ಯ ರಾಜ್ಯ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ವೈದ್ಯರನ್ನು ಖುಷಿಗೊಳಿಸಿತು. ಅರಮನೆ ನಗರಿ ಮೈಸೂರಿನಲ್ಲಿ ಜರುಗಲಿರುವ ಮುಂದಿನ ಸಮ್ಮೇಳನದಲ್ಲಿ ಮತ್ತೇ ಸಿಗೋಣ ಎಂದು ತಮ್ಮ ಊರುಗಳತ್ತ ಡಾಕ್ರ‍್ಸ್ ಹೆಜ್ಜೆ ಹಾಕಿದರು. ಹೀಗಾಗಿ ಮುಂದಿನ ಕರ್‌ಪೆಡಿಕಾನ್-೨೦೨೪ ಹ್ಯಾಂಡ್ ಓವರ್ ಟೂ ಮೈಸೂರು ಎಂದು ಘೋಷಿಸಲಾಯಿತು.
ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ರಾಜ್ಯ ಘಟಕ, ಕರ್ನಾಟಕ ಸ್ಟೇಟ್ ಇನ್ಫೆಕ್ಷನ್ ಡಿಸೀಜಸ್ ಅಸೋಸಿಯೇಷನ್ ಕಲಬುರಗಿ ಮತ್ತು ಬೀದರ್ ಜಿಲ್ಲಾ ಘಟಕ, ಎಂ.ಆರ್.ಮೆಡಿಕಲ್ ಕಾಲೇಜು, ಕೆಬಿಎನ್ ಮೆಡಿಕಲ್ ಕಾಲೇಜ್, ಇಎಸ್‌ಐಸಿ ಮೆಡಿಕಲ್ ಕಾಲೇಜು,ಜಿಮ್ಸ್ ಸಹಯೋಗದಡಿ ಸಮ್ಮೇಳನ ಯಶಸ್ವಿಯಾಗಿ ಜರುಗಿತು.
ಸಮಾರೋಪಕ್ಕೂ ಮೊದಲು ಜರುಗಿದ ವಾರ್ಷಿಕ ಸಭೆಯಲ್ಲಿ ಈ ಭಾಗದಲ್ಲಿ ತಾಯಿ-ಮಗುವಿನ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು, ಅಪೌಷ್ಟಿಕತೆ ಹೋಗಲಾಡಿಸುವ ಮಾರ್ಗ ಕುರಿತು ವೈದ್ಯರೆಲ್ಲರು ಚರ್ಚೆ ನಡೆಸಿದರು. ಜಾಗೃತಿ ಅಭಿಯಾನ, ನಿರಂತರ ಕಾರ್ಯಾಗಾರ, ವೈದ್ಯರಿಂದ ಗ್ರಾಮೀಣ ಮಕ್ಕಳ ನಿರಂತರ ಆರೋಗ್ಯ ತಪಾಸಣೆ ಮೊದಲಾದ ಉಪಕ್ರಮಗಳ ಮೂಲಕ ಭವಿಷ್ಯದ ಭಾರತ ನಿರ್ಮಿಸುವ ಮಕ್ಕಳನ್ನು ಸದೃಢಗೊಳಿಸುವ ನಿರ್ಧಾರಕ್ಕೆ ಬಂದರು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ತಜ್ಞ ವೈದ್ಯರ ಸಂಘ ಅಧ್ಯಕ್ಷರಾದ ಡಾ.ಶರಣಗೌಡ ಪಾಟೀಲ್ ಹಾಗೂ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಜಿ.ಗಚ್ಚಿನಮನಿ, ಖ್ಯಾತ ಮಕ್ಕಳ ತಜ್ಞೆ ಮತ್ತು ನರರೋಗ ತಜ್ಞೆ ಡಾ.ಆರುಂಧತಿ ಪಾಟೀಲ್ ಇತರರು ಮಾತನಾಡಿದರು. ಮೂರು ದಿನಗಳ ಸಮ್ಮೇಳನದಲ್ಲಿ ವೃತ್ತಿ ನಿರತ ವೈದ್ಯರ ಪರಿಣಿತಿಯನ್ನು ಹೆಚ್ಚಿಸಲು ಹಲವು ಕಾರ್ಯಾಗಾರಗಳು ಪೂರಕವಾಗಿ ಮಹತ್ವದ ಮಾಹಿತಿ ನೀಡಿದ್ದು, ಅವನ್ನು ತಮ್ಮ ವೈದ್ಯಕೀಯ ಸೇವೆಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಂಘಟನಾ ಕಾರ್ಯದರ್ಶಿಗಳಾದ ಡಾ.ಬಸವರಾಜ ಎಂ.ಪಾಟೀಲ್ ಚಿಣಮಗೇರಿ, ಡಾ.ಸಂದೀಪ ವಿ.ಎಚ್., ಡಾ.ರೋಹಿತ ಭಂಡಾರ ಮೊದಲಾದವು ವಿಷಯ ಮಂಡಿಸಿದರು. ಸಮ್ಮೇಳನ ಯಶಸ್ವಿಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಡಾ.ವಿನೋದ ಉಪಳಾಂವಕರ್, ಡಾ.ರೂಪಾ ಮಂಗಶೆಟ್ಟಿ, ಡಾ.ಶಾಂತಾ ಕೌಜಲಗಿ, ಡಾ.ವಾಣಿ ಪಾಟೀಲ್ ಸೇರಿದಂತೆ ಮಕ್ಕಳ ತಜ್ಞರು ಮತ್ತು ಪಿಜಿ ಅಂತಿಮ ವರ್ಷದ ವಿದ್ಯಾರ್ಥಿಗಳು ಇದ್ದರು.
ವೃತ್ತಿ ನೈಪುಣ್ಯತೆ ಹೆಚ್ಚಿಸಲು ಸಹಕಾರಿ
ಸಮ್ಮೇಳನದಲ್ಲಿ ಹದಿಹರೆಯದ ಮಕ್ಕಳು ಎದುರಿಸುವ ಸಮಸ್ಯೆಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿ ಪೋಷಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ಅಭಿಯಾನ ಮೊದಲಾದವು ನಡೆಸಲು ಸಹಮತ ವ್ಯಕ್ತವಾಯಿತು. ಶಿಶು ಮರಣ ತಗ್ಗಿಸುವುದು.ವೃತ್ತಿ ನಿರತ ವೈದ್ಯರ ವೃತ್ತಿ ನೈಪುಣ್ಯತೆ ಹೆಚ್ಚಿಸಲು ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿನ ಹೊಸ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲಿತು. ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಮಕ್ಕಳ ತಜ್ಞ ವೈದ್ಯರಿಗೆ ಸಮ್ಮೇಳನ ಸಹಕಾರಿಯಾಯಿತು.
| ಡಾ.ಆರುಂಧತಿ ಪಾಟೀಲ್
ಖ್ಯಾತ ಮಕ್ಕಳ ತಜ್ಞ ವೈದ್ಯರು ಹಾಗೂ ನರರೋಗ ಪರಿಣಿತರು
--
ಎಲ್ಲರ ಸಹಕಾರದಿಂದ ಯಶಸ್ವಿ
ಪಿಡಿಯಾಟ್ರಿಕ್ ಪಿಜಿ ಓದುತ್ತಿರುವವರ ಜ್ಞಾನ ವೃದ್ಧಿ, ಮಕ್ಕಳ ಆರೋಗ್ಯ ವಿಷಯದಲ್ಲಿ ವೈದ್ಯರು ಕೈಗೊಳ್ಳಬೇಕಾದ ಕ್ರಮಗಳು. ಹೊಸ ಸಂಶೋಧನೆ ನಡೆಸುವುದು. ಮಕ್ಕಳ ತಜ್ಞ ವೈದ್ಯರ ಜ್ಞಾನ ವೃದ್ಧಿ ಜತೆಗೆ ಅವರು ಸಮಾಜಕ್ಕಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಚರ್ಚಿಸಿ ನೀಲನಕ್ಷೆ ರೂಪಿಸಲಾಗಿದೆ. ಜಾಗೃತಿ ಕಾರ್ಯಕ್ರಮ ಜತೆಗೆ ಗುಣಮಟ್ಟದ ಶ್ರೇಷ್ಠ ಚಿಕಿತ್ಸೆ ಮಕ್ಕಳಿಗೆ ಲಭಿಸುವಂತೆ ಮಾಡಲು ಮತ್ತು ಕಕ ಭಾಗದಲ್ಲಿ ಶಿಶು ಮರಣ ಕಡಿಮೆಗೊಳಿಸಲು ಸಂಕಲ್ಪ ಮಾಡಲಾಯಿತು.
| ಡಾ.ಶರಣಗೌಡ ಪಾಟೀಲ್
ಕರ್ನಾಟಕ ರಾಜ್ಯ ಮಕ್ಕಳ ತಜ್ಞ ವೈದ್ಯರ ಸಂಘದ ಅಧ್ಯಕ್ಷ
---