ಜಿಲ್ಲೆ

ಫೈನಲ್​ನಲ್ಲಿ ಕರ್ನಾಟಕ-ಒಡಿಶಾ ಹಣಾಹಣಿ

ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಅಂಧ ಮಹಿಳೆಯರ ರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್​ನ ಫೈನಲ್​ಗೆ ಆತಿಥೇಯ ಕರ್ನಾಟಕ ಹಾಗೂ ಒಡಿಶಾ ತಂಡಗಳು ಲಗ್ಗೆ ಇಟ್ಟಿವೆ. ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ಜ. 12ರಂದು ಬೆಳಗ್ಗೆ 9 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ಗುರುವಾರ ಮೊದಲ ಸೆಮಿಫೈನಲ್​ನಲ್ಲಿ ಒಡಿಶಾ, ಆಂಧ್ರಪ್ರದೇಶ ವಿರುದ್ಧ 19 ರನ್​ಗಳ ಅಂತರದಿಂದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಒಡಿಶಾ 20 ಓವರ್​ಗಳಲ್ಲಿ 3 ವಿಕೆಟ್​ಗೆ 183 ರನ್ ಗಳಿಸಿತು. 55 ಎಸೆತಗಳಲ್ಲಿ 82 ರನ್​ಗಳಿಸಿದ ಜಿಲಿ ಬಿರುವಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆಂಧ್ರಪ್ರದೇಶ 6 ವಿಕೆಟ್​ಗೆ 164 ರನ್ ಗಳಿಸಿತು.

2ನೇ ಸೆಮಿಫೈನಲ್​ನಲ್ಲಿ ಆತಿಥೇಯ ಕರ್ನಾಟಕ, ದೆಹಲಿ ವಿರುದ್ಧ 7 ವಿಕೆಟ್​ಗಳಿಂದ ಗೆಲುವು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ, 5ನೇ ವಿಕೆಟ್​ಗೆ ದೆಹಲಿ ಮಣಿಕಾ ಹಾಗೂ ದೀಪಮಾಲಾ ಕುಮಾರಿ ಸೇರಿಸಿದ 67 ರನ್​ಗಳ ಜೊತೆಯಾಟದಿಂದ 20 ಓವರ್​ಗಳಲ್ಲಿ 5 ವಿಕೆಟ್​ಗೆ 132ರನ್ ಗಳಿಸಿತ್ತು. ಕರ್ನಾಟಕ ಇನ್ನೂ 36 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್​ಗಳನ್ನು ಕಳೆದುಕೊಂಡು ಈ ಗುರಿಯನ್ನು ಮುಟ್ಟಿತು. ಫೈನಲ್​ಗೆ ಪ್ರವೇಶ ಪಡೆಯಿತು.

ಕರ್ನಾಟಕದ ದೀಪಿಕಾ ಟಿ.ಸಿ. 63ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಲಕ್ಷ್ಮೀ ಪಿ. 29 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾದರು.