ಜಿಲ್ಲೆ

ಮೊಬೈಲ್​ ಸ್ವಿಚ್ಡ್​ ಆಫ್​ ಮಾಡಬೇಡಿ...

ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಗುರ್ಮೆ ಶೆಟ್ಟಿ ಸಲಹೆ

ಮುಂಗಾರು ಮಳೆ ಪೂರ್ವ ಸಿದ್ಧತಾ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯಲ್ಲಿ ಐದಾರು ದಿನದಿಂದ ಭಾರಿ ಗಾಳಿಮಳೆಯಿಂದಾಗಿ ಮರಗಳು ತಂತಿಗಳ ಮೇಲೆ ಉರುಳಿ ವಿದ್ಯುತ್​ ಸಮಸ್ಯೆ ವ್ಯಾಪಕವಾಗಿದೆ. ನನ್ನ ಮನೆಯಲ್ಲೂ ಮೊನ್ನೆ ದಿನವಿಡಿ ಕರೆಂಟ್​ ಇರಲಿಲ್ಲ. ಮೆಸ್ಕಾಂನಲ್ಲಿ ಲೈನ್​ಮೆನ್​ ಕೊರತೆ ಇರುವುದು ಗಮನಕ್ಕಿದೆ. ಆದರೂ ಸಹ ಇನ್ನೂ 2-3 ತಿಂಗಳು ಜಾಗೃತಿಯಿಂದ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಮೊಬೈಲ್​ ಸ್ವಿಚ್ಡ್​ ಆಫ್​ ಮಾಡಬೇಡಿ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಲಹೆ ನೀಡಿದರು.

ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಆಡಳಿತ ಸೌಧದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಉಡುಪಿ ತಾಲೂಕಿನ 10 ಗ್ರಾಪಂಗಳಲ್ಲಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಮೇ 28ರಂದು ಬೆಳಗ್ಗೆ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಸಹಭಾಗಿತ್ವ ಅಗತ್ಯ

ಶಾಲೆಗಳೂ ಸಹ ನಾಳೆಯಿಂದ ಆರಂಭಗೊಳ್ಳುತ್ತಿದ್ದು ನಿರಂತರ ವಿದ್ಯುತ್​ ಪೂರೈಕೆಯಾಗಬೇಕು. ಕುಡಿಯುವ ನೀರು ಪೂರೈಕೆಗೂ ಸಹ ವಿದ್ಯುತ್​ ಒದಗಿಸಲು ಆದ್ಯತೆ ಕೊಡಬೇಕು. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು. ಸಾಮಾಜಿಕ ಅರಣ್ಯಕ್ಕೆ ಗಮನ ಕೊಡಬೇಕು. ರೋಡ್​ಗಳ 6 ಮೀಟರ್​ ದೂರದಲ್ಲಿ ಗಿಡ ನೆಡಬೇಕು. ಗ್ರಾಪಂನವರು ತಮ್ಮ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಚರಂಡಿ, ತೋಡುಗಳ ಹೂಳೆತ್ತಿಸಬೇಕು ಎಂದರು.

5.25 ಕೋಟಿ ರೂ. ಬಿಡುಗಡೆ

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ರಾಜ್ಯ ಆರೋಗ್ಯ ಇಲಾಖೆಯು ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಿದ್ದು, ನಿಗದಿತ 17 ಕೋಟಿ ರೂ. ಅನುದಾನದಲ್ಲಿ 5.25 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಹಸೀಲ್ದಾರ ಗುರುರಾಜ, ಅರಣ್ಯ ಹಾಗೂ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್​ ಟೆಸ್ಟ್​ ಕಿಟ್​ ಪೂರೈಕೆ

ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ರಾವ್​ ಮಾತನಾಡಿ, ಉಡುಪಿ ತಾಲೂಕಿಗೆ ಕೋವಿಡ್​ ಟೆಸ್ಟ್​ ಕಿಟ್​ ಪೂರೈಕೆಯಾಗಿದೆ. ಉಸಿರಾಟದ ಸಮಸ್ಯೆ ಇರುವವರನ್ನು ಪರೀಕ್ಷಿಸಬೇಕಿದೆ. ಗರ್ಭಿಣಿಯರು, ಗಂಭೀರ ಆರೋಗ್ಯ ಸಮಸ್ಯೆಯುಳ್ಳವರು ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಮಲೇರಿಯಾ, ಡೆಂಘೆ ನಿಯಂತ್ರಣಕ್ಕಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಲಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲೆಗಳ ಹಳೆ ಕಟ್ಟಡ, ಆವರಣ ಗೋಡೆ ಕುಸಿಯಬಹುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗಾ ವಹಿಸಬೇಕು. ಜಲಜೀವನ ಮಿಷನ್​ ಯೋಜನೆಯ ಶೇ. 90 ಕಾಮಗಾರಿ ಪೂರ್ಣವಾಗಿದೆ. ಪೈಪ್​ಲೈನ್​, ಟ್ಯಾಂಕ್​ ಸಂಪರ್ಕ ಕಾರ್ಯ ಮುಗಿದ ಕೂಡಲೇ ವಾರಾಹಿ ಜಲಮೂಲದಿಂದ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. | ಗುರ್ಮೆ ಸುರೇಶ ಶೆಟ್ಟಿ. ಕಾಪು ಶಾಸಕ