ಪಡುಬಿದ್ರಿ: ಕಾಪು ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಸಮುದ್ರಪಾಲಾಗುತ್ತಿದ್ದ ಮೈಸೂರು-ಮಂಡ್ಯ ಮೂಲದ ರಾಹುಲ್ ಮತ್ತು ತೇಜಸ್ ಎಂಬುವರನ್ನು ಸ್ಥಳೀಯರು ಶನಿವಾರ ರಕ್ಷಿಸಿದ್ದಾರೆ.
ಮಂಡ್ಯ ಮತ್ತು ಮೈಸೂರು ಭಾಗದ ಸ್ನೇಹಿತರು ಜತೆಗೂಡಿ ಉಡುಪಿ-ಮಂಗಳೂರಿಗೆ ಬಂದು ಶನಿವಾರ ಸಾಯಂಕಾಲ ಕಾಪು ಬೀಚ್‌ಗೆ ಆಗಮಿಸಿ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದರು. ನೀರಿನಲ್ಲಿ ಆಟವಾಡುತ್ತಾ ಮುಂದೆ ಹೋದ ಪರಶಿವ ಮೂರ್ತಿ, ರಾಹುಲ್, ತೇಜಸ್ ಮತ್ತು ಪವನ್ ಕುಮಾರ್ ಅವರು ನೀರಿನಲ್ಲಿ ಆಟವಾಡುತ್ತಿದ್ದಾಗಲೇ ಸಮುದ್ರದ ಅಲೆಗೆ ಸಿಲುಕಿ ಮುಳುಗೇಳಲಾರಂಭಿಸಿದ್ದರು.
ಇದನ್ನು ಗಮನಿಸಿದ ಕಾಪು ಬೀಚ್ ನಿರ್ವಹಣಾ ತಂಡದ ಸದಸ್ಯರು ಮತ್ತು ಬೀಚ್ ರಕ್ಷಣಾ ತಂಡದ ಸದಸ್ಯರು ವಿಸಿಲ್ ಊದಿದ್ದು, ಇಬ್ಬರು ದಡದತ್ತ ಬರಲಾರಂಭಿಸಿದ್ದರು. ಆದರೆ ಉಪ್ಪು ನೀರು ಮತ್ತು ಸಮುದ್ರದ ಅಲೆಗಳನ್ನು ತಪ್ಪಿಸಿಕೊಂಡು ಬರುವಷ್ಟರಲ್ಲಿ ರಾಹುಲ್ ಹಾಗೂ ತೇಜಸ್ ಮತ್ತಷ್ಟು ಅಪಾಯದ ಸ್ಥಿತಿ ಎದುರಿಸಲಾರಂಭಿಸಿದ್ದರು.
ಅಷ್ಟರಲ್ಲೇ ಸ್ಥಳಕ್ಕೆ ಧಾವಿಸಿದ ಬೀಚ್ ನಿರ್ವಹಣಾ ಉಸ್ತುವಾರಿ ಪ್ರಶಾಂತ್ ಕರ್ಕೇರ ಮತ್ತವರ ಸಂಗಡಿಗರಾದ ಪ್ರಥಮ್, ಸ್ಕೂೃಬಾ ಡೈವಿಂಗ್ ಪರಿಣತರಾದ ಜಾಕ್ಸನ್ ಮತ್ತು ಪ್ರದೀಪ್ ಕುಮಾರ್ ಸಮುದ್ರಕ್ಕೆ ಇಳಿದು ಯುವಕರನ್ನು ರಕ್ಷಿಸಿದರು. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಸಿಲಿಂಡರ್ ಮೂಲಕ ಆಕ್ಸಿಜನ್ ಒದಗಿಸಿ ಯುವಕರ ಪ್ರಾಣ ಉಳಿಸಿದ್ದಾರೆ. ಕಾಪು ಬೀಚ್‌ನಲ್ಲಿ ಕಳೆದೆರಡು ತಿಂಗಳ ಹಿಂದೆ ಇದೇ ರೀತಿ ಸಮುದ್ರಕ್ಕಿಳಿದ ಬೆಂಗಳೂರು ಯುವಕರಿಬ್ಬರಲ್ಲಿ ಓರ್ವ ಮೃತಪಟ್ಟು ಮತ್ತೊಬ್ಬನನ್ನು ರಕ್ಷಿಸಲಾಗಿತ್ತು.