ವಿಜಯವಾಣಿ ಸುದ್ದಿಜಾಲ ಗದಗ
ಕಪ್ಪತಗುಡ್ಡ ಅತ್ಯಂತ ವಿಶಿಷ್ಟವಾಗಿದೆ. ಆ ಬಗ್ಗೆ ಅಧ್ಯಯನ ನಡೆಸಿ, ಕಪ್ಪತಗುಡ್ಡವನ್ನು ಸಂರಕ್ಷಣೆ ಮಾಡುವ ಜೊತೆಗೆ, ಪರಿಸರ ಪ್ರವಾಸೋದ್ಯಮವನ್ನು ಬೆಳಸಿ ಕಪ್ಪತಗುಡ್ಡವನ್ನುಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪಿಸಲಾಗುವುದು ಎಂದು ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾನುವಾರ ಗದಗಿನ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಎಸ್.ಎಸ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಹಕಾರಿ ಹಾಗೂ ಅರಣ್ಯ ಖಾತೆ ಸಚಿವ ಎಸ್.ಎಸ್. ಪಾಟೀಲ ಅವರ ೮೯ ನೇ ಜನ್ಮದಿನಾಚರಣೆ ಅಂಗವಾಗಿ ೧೦೦ ಸಸಿಗಳು, ಗದಗ ಮೃಗಾಲಯದ ಪಕ್ಷಿಗಳ ದತ್ತು ಸ್ವೀಕಾರ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಕ್ಕಾಗಿ ರೆಡ್‌ಕ್ರಾಸ್ ಸಂಸ್ಥೆಗೆ ೧ ಲಕ್ಷ ರೂ. ಠೇವಣಿ ಇಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೪೦ ಎಕರೆ ಪ್ರದೇಶದಲ್ಲಿರುವ ಗದಗ ಮೃಗಾಲಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ಮೃಗಾಲಯ ಆಕರ್ಷಣೆ ಹೆಚ್ಚಿಸಲು ಶೀಘ್ರವೇ ಆನೆ ಕೊಡಲಾಗುವುದು. ಈ ಸಂಬಂಧ ಮೃಗಾಲಯದ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದ್ದು, ಆನೆ ನಿರ್ವಹಣೆಗೆ ಪ್ರತಿವರ್ಷ ೫೦ ಲಕ್ಷ ರೂ. ಅಗತ್ಯವಿದೆ. ಗದಗ ಮೃಗಾಲಯಕ್ಕೆ ವಾರ್ಷಿಕ ೨.೫ ಕೋಟಿ ರೂ. ಬೇಕು. ಸದ್ಯ ೧ ಕೋಟಿ ರೂ. ಆದಾಯವಿದ್ದು ೧.೫ ಕೋಟಿ ರೂ. ಮೃಗಾಲಯ ಪ್ರಾಽಕಾರದಿಂದ ನೀಡಲಾಗುತ್ತಿದೆ. ಇನ್ನು ಐದು ವರ್ಷದಲ್ಲಿ ಗದಗ ಮೃಗಾಲಯ ಲಾಭದಲ್ಲಿ ಸಾಗಿದಾಗ ಪ್ರಾಽಕಾರ ರಚನೆಗೆ ಸಾಧ್ಯವಾಗಲಿದೆ ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕಪ್ಪತಗುಡ್ಡ ಅತ್ಯಂತ ರಮಣೀಯ ಸ್ಥಳವಾಗಿದೆ. ನಂದಿ ಬೆಟ್ಟಕ್ಕೂ ಕಡಿಮೆ ಇಲ್ಲ. ಆದರೆ ಅಭಿವೃದ್ಧಿಯಾಗಬೇಕು. ಪ್ರವಾಸಿಗರಿಗೆ ಸೌಕರ್ಯ ದೊರೆಯಬೇಕು. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೇಮಿಸಿದ್ದ ಸಮಿತಿ ೮೦೪ ಕೋಟಿ ರೂ. ಯೋಜನೆ ರೂಪಿಸಿದೆ. ಅದರಲ್ಲಿ ಅರಣ್ಯ ಪ್ರವಾಸೋದ್ಯಮಕ್ಕೆ ೧೫ ಕೋಟಿ ರೂ. ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಹಕಾರಿ ಸಚಿವ ಎಸ್.ಎಸ್. ಪಾಟೀಲ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿದ್ದಾರೆ. ತಪ್ಪು ಅನಿಸಿದಾಗ ಖಂಡಿಸಿದ್ದಾರೆ. ಅವರು ಅನುಭವದ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಮಾರ್ಗದರ್ಶನ ಮಾಡಲಿ. ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮಗೆಲ್ಲಾ ಪ್ರೇರಣೆಯಾಗಿದೆ ಎಂದರು.
ಮಾಜಿ ಸಹಕಾರಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಅರಣ್ಯ ಭೂಮಿ ಅಕ್ರಮವನ್ನು ಸಕ್ರಮಗೊಳಿಸುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯನ್ನು ಬಿಟ್ಟುಕೊಡಬಾರದು. ಈ ವಿಷಯದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬಾರದು. ಅರಣ್ಯ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕೊಡಲು ಸಾಧ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಜ.ಡಾ. ತೋಂಟದ ಸಿದ್ದರಾಮ ಶ್ರೀಗಳು, ಹಾಗೂ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಐ.ಎಸ್. ಪಾಟೀಲ, ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ, ದೀಪಿಕಾ ಬಾಜಪೇಯಿ, ರವಿ ಮೂಲಿಮನಿ, ರೆಡ್‌ಕ್ರಾಸ್ ಸಂಸ್ಥೆಯ ಡಾ.ಎಂ.ಡಿ. ಸಾಮುದ್ರಿ ಇತರರು ಉಪಸ್ಥಿತರಿದ್ದರು.
ಕೋಟ್:
ಕಪ್ಪತಗುಡ್ಡದಿಂದಾಗಿ ಗದಗ ಜಿಲ್ಲೆಯಲ್ಲಿ ಮಳೆಯಾಗುತ್ತದೆ. ಕಪ್ಪತಗುಡ್ಡ ಉಳಿಯಬೇಕಾದರೆ ಪರಿಸರ ಸೂಕ್ಷ್ಮ ವಲಯವನ್ನು ಈ ಮೊದಲಿನಂತೆ ೧೦ ಕಿ.ಮೀ.ಗೆ ಹೆಚ್ಚಿಸಬೇಕು. ಅಂದಾಗ ಮಾತ್ರ ಕಪ್ಪತಗುಡ್ಡ ಎಲ್ಲ ರೀತಿಯ ಗಣಿಗಾರಿಕೆಯಿಂದ ಮುಕ್ತವಾಗಲು ಸಾಧ್ಯ.
- ತೋಂಟದ ಸಿದ್ದರಾಮ ಶ್ರೀಗಳು