ನಂಜನಗೂಡು ತಾಲೂಕಿನ ಸುತ್ತೂರು, ಹೊಸಕೋಟೆ, ಬೊಕ್ಕಳ್ಳಿ ಗ್ರಾಮಗಳಲ್ಲಿ ಬೆಳೆದಿದ್ದ ಭತ್ತದ ಗದ್ದೆಗಳು ಕಪಿಲಾ ನದಿ ಪ್ರವಾಹದಿಂದ ಮುಳುಗಡೆಯಾಗಿರುವುದು.  
ಜಿಲ್ಲೆ

ಕಪಿಲಾ ನದಿ ಪ್ರವಾಹಕ್ಕೆ ಗದ್ದೆಗಳು ಜಲಾವೃತ

ಶಿವಶಂಕರ್ ಎಂ. ಹೆಬ್ಬಳ್ಳ

ನಂಜನಗೂಡು : ಕೇರಳದ ವೈಯನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಪಿಲಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನದಿಗೆ ಹೆಚ್ಚುವರಿ ನೀರನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ಹಲವು ಗ್ರಾಮಗಳಲ್ಲಿ ಗದ್ದೆಗಳು ಮುಳುಗಡೆಯಾಗಿದೆ.

ತಾಲೂಕಿನ ಹುಲ್ಲಹಳ್ಳಿ ಮತ್ತು ರಾಂಪುರ ನಾಲೆಗಳ ವ್ಯಾಪ್ತಿಯ ರೈತರು ಸಾಲ ಸೋಲ ಮಾಡಿ ಭತ್ತ ಬೆಳೆದಿದ್ದರು. ಕಟಾವಿಗೆ ಬಂದಿದ್ದ ಭತ್ತದ ಬೆಳೆ ಕಪಿಲಾ ನದಿ ನೀರಿನ ಪ್ರವಾಹಕ್ಕೆ ಜಲಾವೃತವಾಗಿದೆ. ಸುತ್ತೂರು, ಬೊಕ್ಕಹಳ್ಳಿ, ಮೂಡಹಳ್ಳಿ, ಹೊಸಕೋಟೆ, ಬಿಳುಗಲಿ, ತಾಯೂರು ಸೇರಿದಂತೆ ಹಲವು ಗ್ರಾಮಗಳ ಸುಮಾರು ನೂರಾರು ಎಕರೆ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.