ಮೈಸೂರು: ಎಚ್.ಡಿ.ಕೋಟೆಯ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿರುವುದರಿಂದ ಕಪಿಲಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಜಲಾಶಯದಿಂದ ನದಿಗೆ 70 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 80 ಮಿಲಿಮೀಟರ್ ಮಳೆ ದಾಖಲಾಗಿದೆ. ಇದರಿಂದ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ಹೊರಹರಿವು ಇನ್ನೂ ಹೆಚ್ಚಾಗಬಹುದು. ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ನಂಜನಗೂಡಿನಲ್ಲಿ ಹೆದ್ದಾರಿ ಬಂದ್ ಆಗಲಿದೆ. ನದಿ ಪಾತ್ರ ಗ್ರಾಮಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಲಿದೆ.
ಈಗಾಗಲೇ ಕಪಿಲಾ ನದಿಯೂ ರೌದ್ರಾವತಾರ ತಾಳಿದ್ದು, ಎಚ್.ಡಿ. ಕೋಟೆ ಮತ್ತು ನಂಜನಗೂಡು ತಾಲೂಕುಗಳ ಕೆಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನಂಜನಗೂಡು ತಾಲೂಕಿನ ನದಿಪಾತ್ರದ ಜಮೀನು ಜಲಾವೃತವಾಗಿದ್ದು, ತಗ್ಗು ಪ್ರದೇಶದಲ್ಲಿದ್ದ ಬಡಾವಣೆಗಳು ಜಲಾವೃತಗೊಂಡಿವೆ.
ಎಚ್.ಡಿ.ಕೋಟೆ ತಾಲೂಕಿನ ಚಕ್ಕೂರು ಗ್ರಾಮದ ಮಾರ್ಗ ಕೆ.ಬೆಳತೂರು ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಶ್ರೀಕ್ಷೇತ್ರ ಸುತ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗಡೆಯಾಗಿದೆ. ಸುತ್ತೂರು ಗ್ರಾಮಸ್ಥರ ಸಂಪರ್ಕ ಕಡಿತಗೊಂಡಿದೆ. ಸೇತುವೆಯ ಎರಡೂ ಬದಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ನುಗು ಡ್ಯಾಂ ಸಹ ಭರ್ತಿಯಾಗುವ ಹಂತಕ್ಕೆ ಬಂದಿದೆ. ಈ ಚಿಕ್ಕ ಜಲಾಶಯದಲ್ಲಿ ಗರಿಷ್ಠ 2,380 ಅಡಿಯಲ್ಲಿ 2,377 ಅಡಿಯಷ್ಟು ನೀರಿನ ಮಟ್ಟ ಏರಿಕೆಯಾಗಿದೆ. 5.10 ಟಿಎಂಸಿ ಸಾಮರ್ಥ್ಯ ಹೊಂದಿರುವ ಇದರಲ್ಲಿ ಈಗಾಗಲೇ 4.55 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ದರಿಂದ 7 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಸರಗೂರು ತಾಲೂಕಿನ ಮುಳ್ಳೂರು, ಚಾಮಲಾಪುರ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ.