ಜಿಲ್ಲೆ

ಅಬ್ಬಿಗೇರಿಯಲ್ಲಿ ಕಂಠಿ ಬಸವೇಶ್ವರ ತೇರು

ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಕಂಠಿ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಂಭ್ರಮದಿಂದ ಸಾವಿರಾರು ಭಕ್ತರ ಸಮುಖದಲ್ಲಿ ಜರುಗಿತು.

ಭಜನೆ, ಡೊಳ್ಳು ವಾದ್ಯ ಮೇಳಗಳ ಝೇಂಕಾರದೊಂದಿಗೆ ಮಹಿಳೆಯರು ಆರತಿ, ಕಳಸ ಹಿಡಿದು ದೇವಸ್ಥಾನಕ್ಕೆ ಆಗಮಿಸಿ ರಥಕ್ಕೆ ಪ್ರದಕ್ಷಿಣೆ ಹಾಕಿದರು. ಭಕ್ತರು ಉತ್ತತ್ತಿ, ಫಲಪುಷ್ಪ ತೇರಿನ ಮೇಲೆ ತೂರಿ ಹರ ಹರ ಮಹಾದೇವ, ಕಂಠಿ ಬಸವೇಶ್ವರ ಮಹಾರಾಜಕಿ ಜೈ ಎಂಬ ಜೈಘೋಷಣೆಗಳನ್ನು ಕೂಗಿ ಭಕ್ತಿ ಮೆರೆದರು.

ಕೋಟುಮಚಗಿ, ಕುರುಡಗಿ, ಯರೇಬೇಲೇರಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ನೀರಲಗಿ, ಜಕ್ಕಲಿ, ಮಾರನಬಸರಿ, ನಿಡಗುಂದಿ, ಕೊಪ್ಪಳ, ಯಲಬುರ್ಗಾ ಸೇರಿ ವಿವಿಧ ಜಿಲ್ಲೆಗಳಿಂದ ಭಕ್ತರು ಪಾಲ್ಗೊಂಡಿದ್ದರು. ಭಕ್ತರು ಬೆಳಿಗ್ಗೆಯಿಂದ ಬಂದು ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮಾಡಿಸಿದರು. ಶರಣಯ್ಯ ಅರಳಲೆಮಠ ಹಾಗೂ ದೇವಸ್ಥಾನದ ಅರ್ಚಕ ಮಂಜುನಾಥ ಪೂಜಾರ ಧಾರ್ಮಿಕ ಕೈಂಕರ್ಯ ನೆರವೇರಿಸಿದರು.