ಹುಮನಾಬಾದ್: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ತಾಲೂಕಿನ ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ(ಬಿಟಿವಿಪಿ) ಕೇಂದ್ರ ಸಮಿತಿ ಅಧ್ಯಕ್ಷರಾಗಿ ಕಂಟೆಪ್ಪ ದಾನಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಸುದೀರ್ಘ ಮೂರೂವರೆ ದಶಕ ಅಧ್ಯಕ್ಷರಾಗಿದ್ದ ಹಿರಿಯ ನ್ಯಾಯವಾದಿ ವೀರುಪಾಕ್ಷಪ್ಪ ಅಗಡಿ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಪಟ್ಟಣದ ಕೇಂದ್ರ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಸಂಸ್ಥೆ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಸದಸ್ಯರ ಒಮ್ಮತದ ಮೇರೆಗೆ ಉಪಾಧ್ಯಕ್ಷರಾಗಿದ್ದ ಕಂಟೆಪ್ಪ ದಾನಾಪ್ಪ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಕಂಟೆಪ್ಪ ಅವರು ಸಂಸ್ಥೆಯ ಹುಡಗಿ ಗ್ರಾಮದ ಸ್ಥಳೀಯ ಸಂಸ್ಥೆಯಲ್ಲಿ ಸುಮಾರು ೨೩ ವರ್ಷ ಅಧ್ಯಕ್ಷ, ನಂತರ ಕೇಂದ್ರ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯಡಿ ಪಟ್ಟಣ ಸೇರಿ ಹುಮನಾಬಾದ್, ಬೀದರ್, ಭಾಲ್ಕಿ ತಾಲೂಕಿನ ಒಂಬತ್ತು ಗ್ರಾಮಗಳಲ್ಲಿ ಸಂಸ್ಥೆಗಳಿದ್ದು, ಎಲ್ಕೆಜಿಯಿಂದ ಪದವಿವರೆಗೆ ಶಿಕ್ಷಣ ಒದಗಿಸುತ್ತಿವೆ. ಮಾದರಿ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ನೂರಾರು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಸಂಸ್ಥೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೇಶವರಾವ ತಳಘಟಕರ, ಕಾರ್ಯದರ್ಶಿ ಅರವಿಂದ ಭಾಲ್ಕಿಕರ, ಖಜಾಂಚಿ ಬಸವರಾಜ ಪಾಟೀಲ್ ಕಮಲಪುರ, ಸಹ ಕಾರ್ಯದರ್ಶಿ ಶಂಕರ ಗಂಗಾಪಾಟೀಲ್, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾಶೆಟ್ಟಿ, ಚನ್ನಪ್ಪ ನಿರ್ಣಾ ಹುಮನಾಬಾದ್, ಸೋಮಯ್ಯ ಮಠಪತಿ ಹಳ್ಳಿಖೇಡ(ಬಿ), ಕಲ್ಲಪ್ಪ ಮಾಶೆಟ್ಟಿ ಹುಡಗಿ, ರಾಜಶೇಖರ ಶಿರಶೆಟ್ಟಿ ದುಬಲಗುಂಡಿ, ಚಂದ್ರಕಾಂತ ನಾಶಿ ಬೇಮಳಖೇಡ, ಬಸವರಾಜ ಬೊಮ್ಮ ಖೇಣಿರಂಜೋಳ, ರಾಜಶೇಖರ ಪಾಟೀಲ್ ಬ್ಯಾಲಹಳ್ಳಿ(ಕೆ), ಗುಂಡಪ್ಪ ಮೂಲಗೆ ಮೀನಕೇರಾ, ಆಡಳಿತಾಧಿಕಾರಿ ಗುಂಡಯ್ಯ ತೀರ್ಥ, ಪ್ರಮುಖರಾದ ಕಾಶೀನಾಥ ಕೋಡ್ಲಿ, ಅಣ್ಣಾರಾವ ಪಾಟೀಲ್, ಮಹಾದೇವ ಸ್ವಾಮಿ, ಶಂಕರರಾವ, ವಿಜಯಕುಮಾರ ಶಾಹನೂರ, ಕಲ್ಯಾಣರಾವ ರಟಕಲï, ಕಾಶೀನಾಥ ಬಿರಾದಾರ ಇತರರಿದ್ದರು.
ಗ್ರಾಮೀಣ ಮಕ್ಕಳಿಗೆ ಕನ್ನಡದಲ್ಲೇ ಗುಣಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸುಮಾರು ಐದು ದಶಕ ಹಿಂದೆ ಹಿರಿಯ ಜೀವಿಗಳಾದ ದಿ.ಬಸವರಾಜ ತಂಬಾಕೆ, ವೀರುಪಾಕ್ಷಪ್ಪ ಅಗಡಿ ಹಾಗೂ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಸಂಸ್ಥೆ ಎಲ್ಲರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಹಾಗೂ ಕೇಂದ್ರ ಮತ್ತು ಸ್ಥಳೀಯ ಸಮಿತಿ ಕಾರ್ಯಕಾರಿ ಮಂಡಳಿ, ಸದಸ್ಯರ ಸಲಹೆ ಸಹಕಾರದೊಂದಿಗೆ ಸಂಸ್ಥೆ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ.
| ಕಂಟೆಪ್ಪ ದಾನಪ್ಪ ಅಧ್ಯಕ್ಷ, ಬಿಟಿವಿಪಿ ಶಿಕ್ಷಣ ಸಂಸ್ಥೆ ಕೇಂದ್ರ ಸಮಿತಿ ಹುಮನಾಬಾದ್