ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ನೇತೃತ್ವದಲ್ಲಿ ಸಿದ್ಧಪಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸುಪ್ರೀಂಕೋರ್ಟ್ ಮಾನದಂಡದಂತೆ ಸಿದ್ಧಪಡಿಸಲಾಗಿದೆ ಎಂದು ಆಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 1892ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ನಡೆಸಿದ ಜನಗಣತಿಯಲ್ಲಿ ಜಾತಿ ಪ್ರಮುಖ ಮಾನದಂಡವಾಗಿತ್ತು. ಆದರೆ, 1958ರಲ್ಲಿ ಕೇಂದ್ರ ಸರ್ಕಾರ ಜನಗಣತಿ ಕಾಯ್ದೆಯಲ್ಲಿ ಜಾತಿಯನ್ನು ಕಡೆಗಣಿಸಿದ್ದಕ್ಕೆ ಕಾರಣಗಳು ತಿಳಿದಿಲ್ಲ. ಆದರೆ, ರಾಜ್ಯದಲ್ಲಿ ಜಾರಿಗೆ ಬಂದ ಮಿಲ್ಲರ್ ಸಮಿತಿ ವರದಿ, ಕೇಂದ್ರದ ಮಂಡಳ ಆಯೋಗದ ವರದಿಗಳು ಜಾತಿಯನ್ನು ಪರಿಗಣಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಹೇಳಿದರು.
ಕಾಂತರಾಜ ಆಯೋಗದ ವರದಿಯಲ್ಲಿದ್ದ ಐವರು ಸದಸ್ಯರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದಾರೆ. 2,500 ಮುಖ್ಯ ತರಬೇತಿದಾರರು 22,186 ಮೇಲ್ವಿಚಾರಕರು ಹಾಗೂ 1,36,416 ಸಿಬ್ಬಂದಿ ಮೂಲಕ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಸಮೀಕ್ಷೆಗೆ ಸ್ವಲ್ಪ ಹಿನ್ನೆಡೆಯಾಗಿರಬಹುದು. ಆದರೆ, ರಾಜ್ಯಾದಾದ್ಯಂತ ಶೇ.99ರಷ್ಟು ಪ್ರಗತಿಯೊಂದಿಗೆ ಸಮೀಕ್ಷೆಯಾಗಿದೆ ಎಂದರು.
ನಾವು ಸಮೀಕ್ಷೆಯ ಪ್ರಗತಿ ಮತ್ತು ಸರಿಯಾದ ಗತಿಯಲ್ಲಿ ನಡೆಯುತ್ತಿದೆಯೇ ಎಂದು ಆಯೋಗದ ಸದಸ್ಯರಾಗಿ ಪರಿಶೀಲಿಸಿದ್ದೇವೆ. ಆಯೋಗದ ಸದಸ್ಯರು ಕಚೇರಿಯಲ್ಲಿ ಕುಳಿತು ವರದಿ ಮಾಡಿದರು, ಜಾತಿ ತಾರಾತಮ್ಯದಲ್ಲಿ ಮಾಡಿದ್ದಾರೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು. ಇದೊಂದು ಕಪೋಲಕಲ್ಪಿತ ಆರೋಪ. ಸಮೀಕ್ಷೆಗೆ ತೆರಳಿದಾಗ ಜನರು ಹೇಳಿದ ಅಂಕಿ-ಅಂಶಗಳನ್ನು ದಾಖಲಿಸಿದ್ದೇವೆ ಹೊರತು ನಾವು ಯಾವುದನ್ನು ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದರು.