ಹುನಗುಂದ : ಕಾಂತರಾಜ ಅವರು ನೀಡಿರುವ ಜಾತಿ ಗಣತಿ ವರದಿಯನ್ನು ನಾವು ಒಪ್ಪುವುದಿಲ್ಲ. ಒಂದು ವೇಳೆ ಈ ವರದಿಯನ್ನೇ ಮುಂದುವರಿಸಿದಲ್ಲಿ ಸಮಾಜದ ಸಂತರು, ಸ್ವಾಮೀಜಿಗಳು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಕಲಗೂಡು ತಾಲೂಕಿನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಪೀಠದ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಶ್ವಕರ್ಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇತ್ತೀಚಿನ ಜಾತಿ ಗಣತಿ ವರದಿಯಲ್ಲಿ ಕೇವಲ 6.86 ಲಕ್ಷ ಎಂದು ಹೇಳಲಾಗಿದೆ. ಆದರೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಅಂದಾಜು 15 ಸಾವಿರ ಜನ ವಿಶ್ವಕರ್ಮ ಸಮುದಾಯದವರಿದ್ದಾರೆ. ರಾಜ್ಯದಲ್ಲಿ ಕಡಿಮೆ ಎಂದರೂ 15 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಕಾಂತರಾಜ್ ಅವರು ನೀಡಿರುವ ಜಾತಿಗಣತಿ ವರದಿಯಲ್ಲಿನ ಅಂಕಿ ಅಂಶಗಳು ವಾಸ್ತವಿಕತೆಯಿಂದ ಕೂಡಿಲ್ಲ. 10 ವರ್ಷಗಳ ಹಿಂದೆ ಮಾಡಿದ ಜಾತಿ ಗಣತಿಯಲ್ಲಿನ ಅಂಕಿ ಅಂಶಗಳು ದೋಷಗಳಿಂದ ಕೂಡಿವೆ. ಗ್ರಾಮೀಣ ಮತ್ತು ದೊಡ್ಡ ನಗರ ಪ್ರದೇಶಗಳಲ್ಲಿನ ಜನರನ್ನು ಸರಿಯಾಗಿ ಗಣತಿ ಮಾಡಿಲ್ಲ ಎಂದರು.
ಗುರುಪ್ಪಯ್ಯ ಸ್ವಾಮೀಜಿ, ವಿಶ್ವನಾಥ ಗಲಗಲಿ, ಭಾಸ್ಕರ ಮಾಡಬಾಳ ಇದ್ದರು.