ಜಿಲ್ಲೆ

ಕನ್ನಹಟ್ಟಿ ಡೇರಿಗೆ ಜೆಡಿಎಸ್ ಬೆಂಬಲಿತರ ಆಯ್ಕೆ: ನೂತನ ವರಿಷ್ಠರನ್ನು ಅಭಿನಂದಿಸಿದ ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ದುದ್ದ ಹೋಬಳಿ ಕನ್ನಹಟ್ಟಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸಿ.ಎಸ್.ಲತಾ ಮತ್ತು ಉಪಾಧ್ಯಕ್ಷೆಯಾಗಿ ಶ್ರುತಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಸಿ.ಎಸ್.ಲತಾ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಶ್ರುತಿ ಮಾತ್ರ ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುಜಾತಾ ಅವಿರೋಧದ ಆಯ್ಕೆಯನ್ನು ಘೋಷಣೆ ಮಾಡಿದರು. ನಿರ್ದೇಶಕಿಯರಾದ ಚೆನ್ನಮ್ಮ, ಸುಕನ್ಯಾ, ಪ್ರಮೀಳಾ, ಮಲ್ಲಮ್ಮ, ಸವಿತಾ, ಸುಮಲತಾ ಇದ್ದರು.

ಅಭಿನಂದನೆ: ಜೆಡಿಎಸ್ ಬೆಂಬಲಿತ ನೂತನ ವರಿಷ್ಠರನ್ನು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಹೈನುಗಾರಿಕೆ ರೈತರಿಗೆ ನಿತ್ಯ ಆದಾಯ ಕೊಡುವ ಕಸುಬಾಗಿದೆ. ಇಂದು ಗ್ರಾಮಗಳಲ್ಲಿ ಮಹಿಳೆಯರು ಹೈನುಗಾರಿಕೆ ಮೂಲಕ ತಮ್ಮ ಬದುಕು ಕಟ್ಟಿಕೊಂಡು ತಮ್ಮ ಕುಟುಂಬ ಸಲುಹುತ್ತಿದ್ದಾರೆ. ಆದ್ದರಿಂದ ಅವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಜಾರಿಗೊಳಿಸಿ ಎಂದು ಸಲಹೆ ನೀಡಿದರು.

ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಸ್‌ಗೌಡ, ಸದಸ್ಯೆ ಬಸಮಣ್ಣಿ ಇದ್ದರು.