ಜಿಲ್ಲೆ

ವಿಜ್ಞಾನ ತಂತ್ರಜ್ಞಾನವನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯ ಮಾಡಬಹುದು : ಡಾ.ಕೆ. ಚಿದಾನಂದ

Mysuru

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯ ಮಾಡಲು ಅವಕಾಶ ಇದೆ ಎಂದು ಕುವೆಂಪು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ-ತಂತ್ರಜ್ಞಾನ ಕನ್ನಡೋತ್ಸವವನ್ನು ಉದ್ಘಾಟಿಸಿ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ವಿಷಯ ಮಂಡಿಸಿದರು.

ಹೆಚ್ಚು ದತ್ತಾಂಶ ಸಂಗ್ರಹಿಸಬೇಕು

ಬ್ರಹ್ಮಾಂಡ ಬುದ್ಧಿಮತ್ತೆ, ಪ್ರಾಕೃತಿಕ ಬುದ್ಧಿಮತ್ತೆ, ಕೃತಕ ಬುದ್ಧಿಮತ್ತೆ, ಬಲಿಷ್ಠ ಬುದ್ಧಿಮತ್ತೆ- ಹೀಗೆ ನಾನಾ ವಿಧಗಳಿವೆ. ಕೃತಕ ಬುದ್ಧಿಮತ್ತೆಯಲ್ಲಿ ಮಾನವರಂತೆ ಸ್ವಯಂ ಅರಿವು ಅಸಾಧ್ಯ. ಕೃತಕ ಬುದ್ಧಿಮತ್ತೆಯಲ್ಲಿ ಅಮೆರಿಕ, ಚೀನಾ ಸೂಪರ್‌ಪವರ್ ದೇಶಗಳಾಗಿವೆ. ಐಟಿಯಲ್ಲಿ ಭಾರತ ಸೂಪರ್ ಪವರ್ ದೇಶವಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿ ಸೂಪರ್ ಪವರ್ ಆಗಬೇಕಾದರೆ ಅಗತ್ಯ ದತ್ತಾಂಶ ಬೇಕು. ಯಾವ ದೇಶದಲ್ಲಿ ದತ್ತಾಂಶ ಹೆಚ್ಚು ಇರುವುದೋ ಆ ದೇಶ ಕೃತಕ ಬುದ್ಧಿಮತ್ತೆಯಲ್ಲಿ ಸೂಪರ್ ಪವರ್ ದೇಶವಾಗುತ್ತದೆ ಎಂದರು.

ವಿಚಾರ ಮಂಡನೆ

ಕನ್ನಡದ ಅರಿವು- ಅಭಿಮಾನ ಕುರಿತು ಕವಯತ್ರಿ ಡಾ.ಲತಾ ರಾಜಶೇಖರ್, ಮಾಧ್ಯಮ ಮತ್ತು ತಂತ್ರಜ್ಞಾನ ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಆಹಾರ ಮತ್ತು ತಂತ್ರಜ್ಞಾನ ಕುರಿತು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಜೀವರಸಾಯನಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರಸನ್ನ ಸಂತೆಕಡೂರು ವಿಷಯ ಮಂಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ, ಎಂಐಟಿ ಅಧ್ಯಕ್ಷ ಎಸ್. ಮುರಳಿ, ಪ್ರಾಂಶುಪಾಲ ಡಾ.ಬಿ.ಜೆ. ನರೇಶ್ ಕುಮಾರ್ ಹಾಗೂ ಇತರರು ಇದ್ದರು.