ಜಿಲ್ಲೆ

ಕನ್ನಡ ಪ್ರಜ್ಞೆ ಪ್ರೇರೇಪಿಸಲು ಪುಸ್ತಕ ಮಾಲಿಕೆ ಸಹಾಯಕ: ಅರವಿಂದ ಚೊಕ್ಕಾಡಿ ಅನಿಸಿಕೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಗಡಿನಾಡಿನ ಸಾಧಕರ ಬದುಕು, ವ್ಯಕ್ತಿತ್ವ, ಸಾಧನೆಗಳನ್ನು ಪುಸ್ತಕ ಮಾಲಿಕೆ ರೂಪದಲ್ಲಿ ಹೊರತಂದಿರುವ ಲೇಖಕರ ಸಾಧನೆ ಸ್ಫೂರ್ತಿದಾಯಕ ಹಾಗೂ ಕನ್ನಡ ಪ್ರಜ್ಞೆಯನ್ನು ಇನ್ನಷ್ಟು ಪ್ರೇರೇಪಿಸಲು ಸಹಾಯಕವಾಗಬಲ್ಲುದು ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.

ಸಾಹಿತಿ ಡಾ.ರಮಾನಂದ ಬನಾರಿ ಸಾರಥ್ಯದಲ್ಲಿ ಗಡಿನಾಡು ಕಾಸರಗೋಡಿನ ವಿವಿಧ ಸಾಧಕರ ಪರಿಚಯ ಕೃತಿ ಸರಣಿ ‘ಕನ್ನಡಿಯಲ್ಲಿ ಕನ್ನಡಿಗ’ ಸಂಚಿಕೆ 3 ಮತ್ತು ಸಂಚಿಕೆ 4ನ್ನು ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಆಶ್ರಯದಲ್ಲಿ ಕೀರಿಕ್ಕಾಡು ಮಾಸ್ಟರ್ ಸ್ಮಾರಕ ಯಕ್ಷಗಾನ ಅಧ್ಯಯನ ಕೇಂದ್ರ ಬನಾರಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ವಿಕಾಸ ಮೀಯಪದವು ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ದ.ಕ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಡಾ.ಮುರಲೀಮೋಹನ ಚೂಂತಾರು ಮುಖ್ಯ ಅತಿಥಿಯಾಗಿದ್ದರು. ಸಾಹಿತಿ ಟಿ.ಎ.ಎನ್.ಖಂಡಿಗೆ, ಸಾಹಿತಿ ಡಾ.ಪ್ರಮೀಳಾ ಮಾಧವ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.

ಸಾಧಕರ ಗೌರವಾರ್ಪಣೆ

ಸಾಧಕರಾದ ಡಾ.ಗೋವಿಂದ ಭಟ್ ಕೊಳ್ಚಪ್ಪೆ, ಶಾನ್ ಕಾಸರಗೋಡು, ಶೀಲಾ ಲಕ್ಷ್ಮೀ ಕಾಸರಗೋಡು, ಪಾರ್ವತಿ ದೇವಿ ಟಿ., ರಾಜೇಂದ್ರ ಕಲ್ಲೂರಾಯ ಎಡನೀರು, ಜಯಲಕ್ಷ್ಮೀ ಕಾರಂತ, ವೆಂಕಟ್ ಭಟ್ ಎಡನೀರು, ಸತ್ಯವತಿ ಭಟ್ ಕೊಳಚೆಪ್ಪು, ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ, ಬಾಲಮಧುರಕಾನನ, ಶಶಿಕಲಾ ಬಾಯಾರು, ಪ್ರೊ.ಶ್ರೀಶ ದೇವ ಪೂಜಿತ್ತಾಯ, ಡಾ.ಬೇ.ಸೀ.ಗೋಪಾಲಕೃಷ್ಣ, ರಾಮಭಟ್ಟ ಸಜಂಗದ್ದೆ ಅವರನ್ನು ಗೌರವಿಸಲಾಯಿತು. ಕವಯತ್ರಿ ಲಕ್ಷ್ಮೀ ವಿ.ಭಟ್ ಸಾಧಕರನ್ನು ಪರಿಚಯಿಸಿದರು.