ಜಿಲ್ಲೆ

ಕನ್ನಡಿಗನ ‘ನಮಸ್ತೆ ಸಿಂಧೂರ’ಬಿಡುಗಡೆ : ಕೆಂಪುಕೋಟೆಯಲ್ಲಿ ರ‌್ಯಾಪರ್ ಪ್ರದರ್ಶನಕ್ಕೆ ಅವಕಾಶ : ಜನ್ಮ ಕ್ರಿಯೇಷನ್ ಸಂಸ್ಥೆ ನಿರ್ಮಾಣ

ಪುತ್ತೂರು ಗ್ರಾಮಾಂತರ: ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಕೆಯ್ಯೂರಿನ ಉದ್ಯಮಿ ಡಾ.ಹರ್ಷವರ್ಧನ್ ರೈ ಮಾಡಾವು ನೇತೃತ್ವದ ಜನ್ಮ ಕ್ರಿಯೇಷನ್ ಸಂಸ್ಥೆಯ ಮೂಲಕ ನಿರ್ಮಾಣಗೊಂಡ ‘ನಮಸ್ತೆ ಸಿಂಧೂರ’ ಗೀತೆ ರೂಪಕ ಕಿರುಚಿತ್ರ ದೆಹಲಿಯ ಕೆಂಪುಕೋಟೆ ಸ್ವಾತಂತ್ರ್ಯೋತ್ಸವದಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಾರ್ಪಣೆಗೊಳಿಸಿದ್ದು, ಸಚಿವ ವಿ.ಸೋಮಣ್ಣ ಕಿರುಚಿತ್ರಕ್ಕೆ ಚಾಲನೆ ನೀಡಿದರು. ಜತೆಗೆ ಕಿರುಚಿತ್ರದ ರ‌್ಯಾಪರ್ ಪ್ರದರ್ಶನಕ್ಕೂ ಅವಕಾಶ ದೊರೆಯಿತು.

ನಮಸ್ತೆ ಸಿಂಧೂರ ಹಿನ್ನೆಲೆ: ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ಪಾಕ್ ವಿರುದ್ಧ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನೇ ಕಥಾವಸ್ತುವಾಗಿ ಇಟ್ಟುಕೊಂಡು ವಿಶೇಷತೆಗಳ ಸ್ಪರ್ಶದೊಂದಿಗೆ ಹಾಡಿನ ಮೂಲಕವೇ ನಿರೂಪಿಸಲಾಗಿದೆ. ಐದು ನಿಮಿಷದ ಕಾಲಾವಧಿಯ ಹಾಡು ಇದಾಗಿದ್ದು, ಪೂರ್ತಿ ಸಿಂಧೂರ ಕಾರ್ಯಾಚರಣೆ ಸಹಿತ ದೇಶಭಕ್ತಿಯನ್ನು ಹಾಡಿನಲ್ಲಿ ತಿಳಿಸಲಾಗಿದೆ. ರಜಾಕ್ ಪುತ್ತೂರು ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನದ ಗೀತರೂಪಕ ಕಿರುಚಿತ್ರದಲ್ಲಿ ಶರತ್ ಆಳ್ವ ಕೂರೇಲು, ವೆನ್ಯಾ ರೈ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜನ್ಮ ಕ್ರಿಯೇಷನ್ ಹಿರಿಮೆ

ಹರ್ಷಕುಮಾರ್ ರೈ ಮಾಡಾವು ಹತ್ತು ವರ್ಷಗಳಿಂದ ಜನ್ಮ ಕ್ರಿಯೇಷನ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜತೆಗೆ ದೇಶಭಕ್ತಿ ಸಾರುವ ಹಲವು ಕಿರುಚಿತ್ರಗಳು, ಆಲ್ಬಂ ಹಾಡು ಮತ್ತು ಧ್ವನಿ ಮುದ್ರಿಕೆಗಳನ್ನು ನಿರ್ಮಾಣ ಮಾಡಿ ದೇಶ ವಿದೇಶಗಳಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ, ಜೈ ಭಾರತಾಂಬೆ ಸಹಿತ ಹಲವು ಕಿರುಚಿತ್ರಗಳನ್ನು ಈ ಸಂಸ್ಥೆ ಲೋಕಾರ್ಪಣೆ ಮಾಡಿದೆ.