ಜಿಲ್ಲೆ

ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು: ಅಲಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿ ಅಧ್ಯಕ್ಷ ಎನ್.ಬೆಟ್ಟೆಗೌಡ ಬೇಸರ

ಮೈಸೂರು: ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿಯಿಂದ ಶಿವರಾಂಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಇತ್ತೀಚೆಗೆ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿ ಅಧ್ಯಕ್ಷ ಎನ್.ಬೆಟ್ಟೆಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರೇ ದಿನ ಕಳೆದಂತೆ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇದನ್ನು ಹೋಗಲಾಡಿಸಬೇಕೆಂದರೆ ಪ್ರತಿ ಮನೆಯಲ್ಲೂ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕಿದೆ ಎಂದರು.

ತಾಯಿಯನ್ನು ಯಾವ ರೀತಿ ನಾವು ಪ್ರೀತಿಸುತ್ತೇವೆಯೋ ಅದೇ ರೀತಿ ಮಾತೃಭಾಷೆ ಕನ್ನಡವನ್ನು ಪ್ರೀತಿಸಬೇಕು. ಆಗ ಮಾತ್ರ ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ. ಕುವೆಂಪು ಅವರು ಹೇಳಿದಂತೆ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಧ್ಯೇಯ ವಾಕ್ಯವನ್ನು ಎಲ್ಲರೂ ಪಾಲಿಸಬೇಕು ಎಂದರು.

ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ.ಇ.ಸಿ. ನಿಂಗರಾಜಗೌಡ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಹೆಚ್ಚು ಬಳಕೆಯಾಗುವುದರಿಂದ ಕನ್ನಡ ಮತ್ತಷ್ಟು ಬೇಲೂರಲು ಸಾಧ್ಯವಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಪದಗಳ ಸಂಶೋಧನೆ ಅಗಬೇಕು ಎಂದು ಅಭಿಪ್ರಾಯಪಟ್ಟರು.

ಮೈಸೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಆಗ ತಾನೇ ತಾನಾಗಿ ಕನ್ನಡ ಉಳಿದು, ಬೆಳೆಯುತ್ತದೆ ಎಂದು ಹೇಳಿದರು.

ಸಂಸ್ಕೃತಿ ಚಿಂತಕ ರಘುರಾಮ್ ವಾಜಪೇಯಿ ಮಾತನಾಡಿ, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕನ್ನಡ ನಾಡಿನ ವಿಸ್ತಾರ ಹಾಗೂ ಭೌಗೋಳಿಕ ವರದಿ ಕನ್ನಡ ಭಾಷೆಯ ಬೆಳವಣಿಗೆ ಇಂದಿನ ಅಗತ್ಯತೆ ಕುರಿತು ವಿವರಿಸಿದರು.

ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಸುದೀರ್ಘ ಇತಿಹಾಸವಿದೆ. ಕನ್ನಡವೆಂದರೆ ಭಾಷೆ ಮಾತ್ರವಲ್ಲ, ಅದೊಂದು ಭಾವನಾತ್ಮಕವಾದದ್ದು. ಸರ್ಕಾರಗಳು ಕನ್ನಡದಲ್ಲಿ ಆಡಳಿತ ನಡೆಸುವಂತಾಗಬೇಕು ಎಂದರು.

ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ರಾಮಕೃಷ್ಣ, ಮುಖಂಡರಾದ ರಾಮು, ಹರೀಶ್ ಇತರರು ಇದ್ದರು.