ಮೈಸೂರು: ಹೊರಗಿನಿಂದ ಬಂದವರು ಭಾಷೆ ಕಲಿತು ಕನ್ನಡಕ್ಕೆ ಕೊಡುಗೆ ನೀಡಿರುವಾಗ ಪ್ರಸ್ತುತ ಕನ್ನಡಿಗರಿಗೆ ಕನ್ನಡ ಕಲಿಸಬೇಕಾದ ದೌರ್ಭಾಗ್ಯ ಬಂದೊದಗಿದೆ ಎಂದು ಲೇಖಕ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಬುಧವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡಾಂಬೆ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಭಾಷಿಕರು ಕನ್ನಡ ಕಲಿತು ಕನ್ನಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ದೌರ್ಭಾಗ್ಯ ಒದಗಿ ಬಂದಿದೆ. ಭಾಷೆಯ ಕುರಿತು ಅಭಿಮಾನ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ದೂರಿದರು.
ಮಕ್ಕಳಿಗೆ ಕನ್ನಡ ಕಲಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಜರ್ಮನಿಯಿಂದ ಬಂದ ಕಿಟಲ್ ಕನ್ನಡಕ್ಕೆ ಅಮೂಲ್ಯವಾದ ನಿಘಂಟು ನೀಡಿದರು. ಟಿ.ಪಿ. ಕೈಲಾಸಂ ಸೇರಿದಂತೆ ಅನೇಕ ಮಹನೀಯರು ಕನ್ನಡಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡ ಈಗಾಗಲೇ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಅದನ್ನು ನಾವು ಉಸಿರು ಮಾಡಿಕೊಳ್ಳಬೇಕಿದೆ ಎಂದರು.
ಕನ್ನಡದ ಬಗ್ಗೆ ಯಾವುದೇ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಅದಕ್ಕೆ ಉದಾಹರಣೆಯಾಗಿ ಮಹಾಜನ್, ಸರೋಜಿನಿ ಸೇರಿದಂತೆ ಅನೇಕ ಹೋರಾಟಗಳು ನಮ್ಮ ಕಣ್ಣ ಮುಂದಿವೆ. ಡಾ.ರಾಜ್‌ಕುಮಾರ್, ಪಾಟೀಲ ಪುಟ್ಟಪ್ಪ ಸೇರಿದಂತೆ ಅನೇಕರಿಂದ ದೊಡ್ಡ ಮಟ್ಟದ ಹೋರಾಟ ಕಂಡ ಗೋಕಾಕ್ ಚಳವಳಿ ವರದಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಇದರಿಂದ ಬೆಳಗಾವಿಯಲ್ಲಿ ಕನ್ನಡಿಗರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದರು.
ಕನ್ನಡಕ್ಕೆ ಕೈ ಎತ್ತಿದರೆ ಕಲ್ಪವೃಕ್ಷವಾಗುತ್ತದೆ ಎಂಬ ಮಾತು ಇತ್ತು. ಆದರೆ ಇಂದು ಅದೇ ಕೈಯನ್ನೇ ಕಡಿಯುತ್ತಿದ್ದಾರೆ. ಕನ್ನಡಕ್ಕಾಗಿ ಹೋರಾಟ ಮಾಡುವವರು ಇಂದಿಗೂ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಹಾಗೇ 30 ವರ್ಷಗಳ ಹಿಂದೆ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ದೇಸೀಹಳ್ಳಿ ರಾಮಚಂದ್ರ ಎಂಬುವರು ಕನ್ನಡ ಅಂಕಿ ಬಳಸಿದ್ದಕ್ಕಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಇಂದಿಗೂ ಅವರು ಈ ಪ್ರಕರಣದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡರೆ, ಒಂದು ದಿನದಲ್ಲಿಯೇ ಈ ರೀತಿಯ ಸಮಸ್ಯೆ ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟರು.
ಶಾಸಕ ಟಿ.ಎಸ್.ಶ್ರೀವತ್ಸ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಶ್ರೀ ಅರ್ಜುನ್ ಅವಧೂತ ಗುರು, ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್ ಇತರರು ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.