ಬೆಂಗಳೂರು: ಫೆಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್‌ಎಐ) ಅಧ್ಯಕ್ಷರಾಗಿ ಕನ್ನಡಿಗ ಶ್ಯಾಮರಾಜು ಆಯ್ಕೆಯಾಗಿದ್ದಾರೆ.
50 ವರ್ಷಗಳ ನಂತರ ಕನ್ನಡಿಗರು ಎಫ್ಎಚ್ಆರ್‌ಎಐ ಅಧ್ಯಕ್ಷರಾಗಿದ್ದು, ಇದರಿಂದ ದಕ್ಷಿಣ ಭಾರತ ಅದರಲ್ಲೂ ರಾಜ್ಯದ ಪ್ರಾವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ಫೆಡರೇಶನ್ನಿನ ವಾರ್ಷಿಕ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ನಡೆದ ಚುನಾವಣೆಯಲ್ಲಿ ಕೆ. ಶ್ಯಾಮರಾಜು ಮತ್ತವರ ಬೆಂಬಲಿಗರ ನೂನನ ವ್ಯವಸ್ಥಾಪಕ ಸಮಿತಿಯ ಸದಸ್ಯರು ಒಂದು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.
ಹೋಟೆಲ್ ಮೌರ್ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ಯಾಮರಾಜು ಹಾಲಿ ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ಟೂರಿಸಂ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಮುಂಬರುವ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಕ್ಷಿಪ್ರ ಬೆಳವಣಿಗೆಗೆ ಪೂರಕವಾಗಿ ಹೊಟೇಲ್ ಉದ್ಯಮಿಗಳ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.