ಜಿಲ್ಲೆ

ಅಭಿಮಾನದ ಭಾಷೆಯಾದರೆ ಕನ್ನಡ ಉಳಿವು: ಪ್ರಾಧ್ಯಾಪಕ ಡಾ.ಪಿ.ಬೆಟ್ಟೇಗೌಡ ಅಭಿಮತ

ಮೈಸೂರು: ಅಭಿಮಾನದ ಕೊರತೆಯಿಂದ ಕನ್ನಡಕ್ಕೆ ಈಗ ಅವಮಾನದ ಭಾಷೆ ಎನ್ನುವ ಭಾವನೆ ಮೂಡಿಸಿದೆ. ಇದನ್ನು ತೊಡೆದು ಹಾಕಲು ಕನ್ನಡ ಬಳಸುವ ಮೂಲಕ ಅಭಿಮಾನ ಮೂಡಿಸಬೇಕು ಎಂದು ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪಿ.ಬೆಟ್ಟೇಗೌಡ ಹೇಳಿದರು.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ‘ಕನ್ನಡ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಲವು ಕನ್ನಡ ಶಾಲೆಗಳು ಮುಚ್ಚಿ ಹೋಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತೇವೆೆ ಎಂದು ಅನುಮೋದನೆ ಪಡೆದು, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ ಎಂದು ಬೇಸರಿಸಿದರು.
ಕನ್ನಡ ಅನ್ನ, ಜ್ಞಾನ ನೀಡುವ ಭಾಷೆಯಾಗಬೇಕು. ಕನ್ನಡವನ್ನು ಬಳಸಿದರೆ ಮಾತ್ರ ಉಳಿಯಲು ಸಾಧ್ಯ. ಆದರೆ ಇಂದು ನಾವು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಬಳಸುವುದನ್ನು ಮರೆತಿದ್ದೇವೆ. ಕನ್ನಡವು ಅವಮಾನದ ಭಾಷೆಯಾಗದೆ ಅಭಿಮಾನದ ಭಾಷೆಯಾಗಬೇಕು. ಆಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಇವುಗಳಲ್ಲಿ ಭಾಷೆಯನ್ನು ಬೆರೆಸಿದರೆ ಕನ್ನಡ ಉಳಿಯುತ್ತದೆ. ಆರೋಗ್ಯ, ಶಿಕ್ಷಣ ಎಲ್ಲ ವರ್ಗ, ಧರ್ಮ, ಜಾತಿಗೂ ಅವಶ್ಯವಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ತಾರತಮ್ಯವಿಲ್ಲದಂತೆ ಎಲ್ಲ ಜನರಿಗೆ ಬೇಕಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಭಾಷೆ ಬಳಕೆಗೆ ತರಬೇಕು ಎಂದು ಹೇಳಿದರು.
ಪ್ರಾಂಶುಪಾಲ ಪೊ.ಎಂ.ಅಬ್ದುಲ್ ರೆಹಮಾನ್ ಮಾತನಾಡಿ, ಭಾಷೆಯ ಉಳಿವು ಅದನ್ನು ಬಳಸುವುದರಲ್ಲಿದೆ. ಹಾಗಾಗಿ ಕನ್ನಡವನ್ನು ಹೆಚ್ಚು ಬಳಸಿದಷ್ಟು ಅದು ಬೆಳೆಯುತ್ತದೆ. ಮಾತೃಭಾಷೆ ಭಾವಕ್ಕೆ ಹತ್ತಿರವಾಗುವುದರಿಂದ ಕನ್ನಡ ಹೃದಯ ಭಾಷೆಯಾಗುತ್ತದೆ. ಆದರೆ ಇಂಗ್ಲಿಷ್‌ನಲ್ಲಿ ಭಾವನೆ ಕಡಿಮೆ. ಹಾಗಾಗಿ, ನಮ್ಮ ಅಸ್ಮಿತೆಯಾಗಿರುವ ಕನ್ನಡವನ್ನೇ ಬದುಕಿನಲ್ಲಿ ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿ ಕನ್ನಡ ಸಹ ಪ್ರಾಧ್ಯಾಪಕ ಡಾ.ಕೆಂಡಗಣ್ಣೇಗೌಡ ಮಾತನಾಡಿ, ಆಧುನಿಕ ಬದುಕಿನಲ್ಲಿ ತಂತ್ರಜ್ಞಾನ ಬಳಕೆ ಜಾಸ್ತಿಯಾಗಿದೆ. ತಂತ್ರಜ್ಞಾದ ಮೂಲಕ ಕನ್ನಡ ಕಲಿಸುವ ಪ್ರಯತ್ನಗಳಾಗಬೇಕು ಎಂದರು.
ಪ್ರಾಧ್ಯಾಪಕ ಸಿದ್ದೇಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ವಿ.ಲಲಿತಾ, ವಿದ್ಯಾರ್ಥಿ ಸಂಸತ್ತಿನ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಂ.ಶರಣ್ಯ, ಉಪಾಧ್ಯಕ್ಷೆ ಬಿ.ಎಂ.ಅರ್ಚನಾ, ಕಾರ್ಯದರ್ಶಿ ಕಾವ್ಯಾ ಎಂ.ಕಟ್ಟಿ, ಜಂಟಿ ಕಾರ್ಯದರ್ಶಿ ಆರ್.ಮೇಘನಾ, ಕನ್ನಡ ಸಂಪಾದಕಿ ಎಂ.ಕೀರ್ತಿ, ಇಂಗ್ಲಿಷ್ ವಿಭಾಗದ ಸಂಪಾದಕಿ ಆರ್.ಚೈತ್ರಾ, ಎನ್‌ಎಸ್‌ಎಸ್ ಘಟಕ-1ರ ಕಾರ್ಯದರ್ಶಿ ಕೆ.ಸಹನಾ, ಘಟಕ-2ರ ಕಾರ್ಯದರ್ಶಿ ಕೆ.ಆರ್.ಸಿಂಚನಾ, ಕ್ರೀಡಾ ಕಾರ್ಯದರ್ಶಿ ವಿ.ಲಿಖಿತಾ, ಜಂಟಿ ಕ್ರಿಡಾ ಕಾರ್ಯದರ್ಶಿ ಎಸ್.ಎಂ.ಐಶ್ವರ್ಯ, ರೇಂಜರ್‌ರಸ ಘಟಕ-1ರ ಕಾರ್ಯದರ್ಶಿ ಕೆ.ಸೋನಿಯ, ಘಟಕ-2ರ ಕಾರ್ಯದರ್ಶಿ ಬಿ.ಹರ್ಷಿತಾ ಇದ್ದರು.