ಬಳ್ಳಾರಿ ಪೊಲೀಸ್ ಜಿಮ್ಖಾನ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯನ್ನು ಕವಿ ಬಿ.ಆರ್.ಲಕ್ಷ್ಮಣರಾವ್ ಉದ್ಘಾಟಿಸಿದರು. 
ಜಿಲ್ಲೆ

ಕನ್ನಡ ವಿವಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ: ಬಳ್ಳಾರಿಯಲ್ಲಿ ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಒತ್ತಾಯ

ಬಳ್ಳಾರಿ: ಕನ್ನಡ ವಿವಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದು ಖೇದಕರ ಸಂಗತಿ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಬೇಸರ ವ್ಯಕ್ತಪಡಿಸಿದರು.

ರಾಷ್ಟೀಯ ಯುವ ದಿನ ಅಂಗವಾಗಿ ನಗರದ ಪೊಲೀಸ್ ಜಿಮ್ಖಾನ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಮಾತನಾಡಿದರು. ವಿವಿಗೆ ಅನುದಾನ ಬಿಡುಗಡೆ ಮಾಡದ ಕಾರಣ ಹಲವು ಸಿಬ್ಬಂದಿಗೆ ವೇತನ ನೀಡಿಲ್ಲ ಎನ್ನಲಾಗಿದೆ. ಸರ್ಕಾರ ಶೀಘ್ರವೇ ಹಣ ಬಿಡುಗಡೆ ಮಾಡಲಿ ಎಂದರು.

ತತ್ವಜ್ಞಾನಿ ಆಕಾಶ ನೋಡುತ್ತಿದ್ದರೆ ಕವಿ ಭೂಮಿ ನೋಡುತ್ತಿರುತ್ತಾನೆ. ಕವಿ ಸದಾ ಭೂಮಿಯ ಪುತ್ರ. ಮನುಷ್ಯನಿಗೆ ದೇಹ ಮತ್ತು ಮನಸ್ಸಿನ ಹಸಿವುಗಳುಂಟು. ಒಂದು ಬದುಕಲು, ಇನ್ನೊಂದು ಸಂತೋಷಕ್ಕಾಗಿ. ಅದೇ ರೀತಿ ಬಾಹ್ಯ ಜೀವನ ನಾಗರಿಕತೆಯಿಂದ ಹಾಗೂ ಅಂತರಂಗವು ಸಂಸ್ಕೃತಿ, ಸಾಹಿತ್ಯ, ಸಂಗೀತದಿಂದ ಕೂಡಿದರೆ ಬದುಕು ಸಮಚಿತ್ತದಿಂದ ಇರುತ್ತದೆ ಎಂದರು.

ನಾಡು, ನುಡಿ, ಸಂಸ್ಕೃತಿ, ಭಾಷೆ, ಸಾಹಿತ್ಯಗಳ ಅಗತ್ಯ ಮನುಷ್ಯನಿಗೆ ಇರಬೇಕು. ಕವಿಗಳು ಆಗಲು ಪ್ರತಿಭೆ ಜತೆಗೆ ಸಂಕಲ್ಪ ಮತ್ತು ಪರಿಶ್ರಮ ಅಗತ್ಯ ಎಂದ ಅವರು, ಕವಿತೆ ರಚಿಸಲು ಭಾಷೆ, ಬರವಣಿಗೆ ಮುಖ್ಯ ಎಂದು ಹೇಳಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ನಾಡಿನ ಹಿರಿಯ ಕವಿಗಳು, ಸಾಹಿತಿಗಳು, ಚಿಂತಕರು ಬಹುದೊಡ್ಡ ಕಾವ್ಯ ಶಕ್ತಿ ಕಟ್ಟಿಕೊಟ್ಟಿದ್ದಾರೆ. ನಾವು ಅವರ ದಾರಿಯಲ್ಲಿ ನಡೆಯಬೇಕು ಎಂದರು. ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿದರು.

ಯುವ ಕವಿಗಳಾದ ಬಿ.ಸೈಯದ್ ಹುಸೇನ್, ಅಂಜಲಿ ಬೆಳಗಲ್ಲು, ನಟರಾಜ್ ಸೋನಾರ್, ಶಬ್ರೀನಾ ಮಹ್ಮದ್ ಅಲಿ, ಆನಂದ್ ಎಎಸ್‌ಎಸ್, ರಾಮಚಂದ್ರ ಲಕ್ಕಳ್ಳಿ ಸೇರಿ ಇತರರು ಕವನ ವಾಚಿಸಿದರು. ಜನಕಲ್ಯಾಣ ವೇದಿಕೆ ಜಿಲ್ಲಾ ಅಧ್ಯಕ್ಷ ಜೆ.ಎಂ ಬಸವರಾಜ ಸ್ವಾಮಿ, ಹಿರಿಯ ಮುಖಂಡ ರಮೇಶ್ ಬುಜ್ಜಿ, ಕಾರ್ಮಿಕ ಮುಖಂಡ ಹಂಪೇರು ಹಾಲೇಶ್ವರ ಗೌಡ, ಪತ್ರಕರ್ತ ಎಚ್.ಎಂ.ಮಹೇಂದ್ರ ಕುಮಾರ್ ಇತರರಿದ್ದರು.