ಮೈಸೂರು: ಇಂದಿನ ಯುವ ಜನಾಂಗದಿಂದ ಕನ್ನಡ ಭಾಷೆಯ ಮಾಧುರ್ಯಕ್ಕೆ ಧಕ್ಕೆಯಾಗುವಂತೆ ಭಾಷೆಯನ್ನು ವಿರೂಪಗೊಳಿಸಲಾಗುತ್ತಿದೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಬೇಸರ ವ್ಯಕ್ತಪಡಿಸಿದರು.
ಮೈಸೂರು ತಾಲೂಕಿನ ಹಾರೋಹಳ್ಳಿ-ಮೆಲ್ಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ‘ಮಾಸ್ತಿ ಕನ್ನಡ ಸಂಘ’ದಿಂದ ಇತ್ತೀಚೆಗೆ ಆಯೋಜಿಸಿದ್ದ ‘ಕನ್ನಡ ನಿತ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಯುವಜನತೆ ಕನ್ನಡ ಭಾಷೆಯ ಸೌಂದರ್ಯಕ್ಕೂ ಮಾಧುರ್ಯಕ್ಕೂ ಧಕ್ಕೆಯಾಗುವ ರೀತಿಯಲ್ಲಿ ಬಳಸುವ ಮೂಲಕ ವಿರೂಪಗೊಳಿಸುತ್ತಿದ್ದಾರೆ. ಕನ್ನಡ ಭಾಷೆಗೆ ತನ್ನದೇ ಆದ ಪ್ರಾಚೀನತೆ ಮತ್ತು ಪರಂಪರೆ ಇದೆ. ವಿಶಿಷ್ಟವಾದ ಲಯ ಹೊಂದಿದೆ. ಸುಲಭವಾಗಿ ಕಲಿಯಬಹುದು. ಜತೆಗೆ ಸರಾಗವಾದ ಸಂವಹನವೂ ಸಾಧ್ಯ. ಇಂತಹ ಭಾಷಿಕ ಸಹತೆಯನ್ನು ವಿದ್ಯಾರ್ಥಿಗಳೂ ಯುವಜನರೂ ‘ಕಂಗ್ಲಿಷ್ ಮಯ’ ಮಾಡುತ್ತಿರುವುದಲ್ಲದೆ, ‘ಮೂಲಸ್ವರೂಪ’ವನ್ನೇ ಹಾಳುಗೆಡುವುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕಿ ಸಿ.ಎಸ್. ಸುಜಾತಾ ಮಾತನಾಡಿ, ಸಮಾಜದ ಏಳಿಗೆಗಾಗಿ ದುಡಿದ ಮಹಾನ್ ಪುಣ್ಯಪುರುಷರ ಆಗಾಗ ಸ್ಮರಿಸಿಕೊಳ್ಳಬೇಕು. ಅವರ ವಿಚಾರಗಳ ದಾರಿಯಲ್ಲಿ ಸಾಗಬೇಕು. ಅವರಂತೆ ಸಾಧನೆಯನ್ನೂ ಮಾಡಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪಾಂಡಣ್ಣ ಮಾತನಾಡಿ, ಶಾಲಾ ಕಾಲೇಜಿನ ಗಂಡು ಮಕ್ಕಳು ವ್ಯಾಸಂಗದಲ್ಲಿ ಸದಾ ಹಿಂದುಳಿದಿರುತ್ತಾರೆ. ಓದು, ಬರಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ. ಅವರೂ ಸಹ ಹೆಣ್ಣು ಮಕ್ಕಳ ರೀತಿಯಲ್ಲಿ ಸಾಧನೆ ಮಾಡಬೇಕು. ನಡೆ ಮತ್ತು ನುಡಿಯಲ್ಲಿ ಕನ್ನಡತನ ಬಿಂಬಿಸಬೇಕು ಎಂದರು.
ಕನ್ನಡ ಅಧ್ಯಾಪಕಿ ಬಿ.ಎಲ್.ನಳಿನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ಧನಲಕ್ಷ್ಮಿ ಕನ್ನಡ ರಾಜ್ಯೋತ್ಸವ ಕುರಿತು, ಹಂಸವೇಣಿ ಜವಾಹರಲಾಲ್ ನೆಹರು ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿನಿ ದೀಪು ವಾರ್ಷಿಕ ವರದಿ ಮಂಡಿಸಿದರು.
ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹದೇವ ಶೆಟ್ಟಿ, ಸದಸ್ಯರಾದ ಗಿಣಿಸ್ವಾಮಿ, ಇಂದ್ರಾಮಣಿ, ಗೌರಮ್ಮ, ಬಾಬು, ಗ್ರಾಮ ಪಂಚಾಯತಿ ಸದಸ್ಯೆ ಶ್ರುತಿ, ಶಿಕ್ಷಕಿಯರಾದ ಚೈತ್ರಾ, ಎಂ. ಕಾವ್ಯಾ ಇತರರು ಇದ್ದರು.