ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಕನ್ನಡ ಬಳಸುವ ಕೌಶಲತೆ ಹೆಚ್ಚಿಸಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

ಕೆ.ಎನ್.ರಾಘವೇಂದ್ರ
ಮಂಡ್ಯ: ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಬಳಸುವ  ಕೌಶಲತೆ ಹೆಚ್ಚಿಸಿದಾಗ ಭಾಷೆಯ ಮೇಲಿನ ಹಿಡಿತ ವೃದ್ದಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಎಸ್.ಬಿ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ವೇದಿಕೆಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಕನ್ನಡ ವಿಷಯ ಕಾರ್ಯಾಗಾರ ಉದ್ಘಾಟಿಸಿ  ಮಾತನಾಡಿದರು.
ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವೈಭವವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ಶೈಲಿಯಲ್ಲಿ ಬೋಧಿಸಬೇಕು. ಭಾಷೆಯ ಹಿಡಿತ ಹೆಚ್ಚಾದರೆ ಎಲ್ಲ ಪಠ್ಯ ವಿಷಯಗಳು ಸರಳ ಎನ್ನಿಸುತ್ತವೆ. ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಯುತ್ತದೆ ಎಂದು ನುಡಿದರು. ಡಿಸೆಂಬರ್ ತಿಂಗಳಲ್ಲಿ ಗ್ರಾಮೀಣ ಸೊಬಡಿನ ಭಾಷೆಯ ಮಂಡ್ಯ ಪುಣ್ಯಭೂಮಿಯಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಈಗಾಲೇ ಸಿದ್ದತೆಗಳು ನಡೆಯುತ್ತಿವೆ, ಕನ್ನಡ ಭಾಷಾ ಭೋಧನೆ ಮಾಡುವ ಶಾಲಾ ಶಿಕ್ಷಕರು ಭಾಗಿಯಾಗಲು ೩ ದಿನ ಎಲ್ಲಾ ಸೌಲಭ್ಯ ಲಭ್ಯವಾಗುವಂತೆ ಶಿಕ್ಷಣ ಇಲಾಖೆಯೊಂದಿಗೆ ಮಾತನಾಡಲಾಗುವುದು.
ಕರ್ನಾಟಕ  ಏಕೀಕರಣಗೊಂಡು ೫೦ನೇ ವರ್ಷ ಆಚರಣೆಯ ದಿನಗಳಲ್ಲಿ ಸಮ್ಮೇಳನ ಯಶಸ್ಸಿಗೊಳಿಸಿ ಕೀರ್ತಿ ಬರುವಂತೆ ಶ್ರಮಿಸೋಣ ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ  ಡಾ.ಮೀರಾ ಶಿವಲಿಂಗಯ್ಯ, ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಇಂದ್ರಾಣಿ,  ಶಿಕ್ಷಣ ಅಧಿಕಾರಿ ಚಂದ್ರಕಾಂತಾ, ಡಿವೈಪಿಸಿ ಲಕ್ಷ್ಮೀ,  ಹಿರಿಯ ಉಪನ್ಯಾಸಕಿ ರೇಣುಕಮ್ಮ,  ಚಂದ್ರಶೇಖರ್, ಮುಖ್ಯಶಿಕ್ಷಕ ನಾಗೇಂದ್ರ ಮೂರ್ತಿ,  ಡಾ.ಜಿ.ಆರ್.ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಡಾ. ಕೃಷ್ಣೇಗೌಡ, ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ, ಆಯೋಜಕರಾದ ಜಯರಾಮು,  ಶಶಿಧರ ಈಚಗೆರೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿಗಳು ಕನ್ನಡ ಶಿಕ್ಷಕರಿಗೆ ಕೌಶಲ ಜ್ಞಾನ ಕುರಿತು ದಿಕ್ಸೂಚಿ ಭಾಷಣ ಮಾಡಿದರು.