ಶ್ರೀರಂಗಪಟ್ಟಣ: ಸುಶಿಕ್ಷಿತರಿಂದಲೇ ಕನ್ನಡ ನುಡಿಗೆ ಅಪಾಯ ಉಂಟಾಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಮಕ್ಕಳ ವೈದ್ಯ ಡಾ.ಸುಜಯ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಬುಧವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೌರವ ಪುರಸ್ಕಾರದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಶತಮಾನಗಳಷ್ಟು ಪ್ರಾಚೀನ ಹಾಗೂ ಸಂಸ್ಕೃತಿ ಇರುವ ಕನ್ನಡ ನುಡಿ, ಕನ್ನಡತನವನ್ನು ಕನ್ನಡಿಗರೇ ಮರೆಯುತ್ತಿರುವ ಬಗ್ಗೆ ಎಚ್ಚರಗೊಳ್ಳಬೇಕಿದೆ ಎಂದರು.
ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಕನ್ನಡಿಗರಾಗಿ ನಾವು ಬೇರೆ ಭಾಷೆಗಳನ್ನು ಗೌರವಿಸೋಣ. ನಮ್ಮ ಭಾಷೆ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸೋಣ. ನೆಲ, ಜಲ, ನುಡಿಯ ಬಗ್ಗೆ ನಾವು ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದರು.
ಅಭಿನಂದನೆ: ವಿವಿಧ ಕ್ಷೇತ್ರಗಳ ಸಾಧಕರನ್ನು ಗಣ್ಯರು ಅಭಿನಂದಿಸಿದರು. ಇದಕ್ಕೂ ಮೊದಲು ಪಟ್ಟಣ ಮುಖ್ಯರಸ್ತೆಯಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಪಥಸಂಚಲನ ನಡೆಯಿತು. ಬೃಹತ್ ಕನ್ನಡ ಧ್ವಜದ ಮೆರವಣಿಗೆಯೊಂದಿಗೆ ಕನ್ನಡ ತೇರನ್ನು ಎಳೆದು ಮೆರವಣಿಗೆ ನಡೆಸಲಾಯಿತು.
ಪುರಸಭಾ ಸದಸ್ಯರಾದ ವಸಂತಕುಮಾರಿ ಲೋಕೇಶ್, ಎಸ್.ದಯಾನಂದ್, ತಹಸೀಲ್ದಾರ್ ಜಿ.ಅಶ್ವಿನಿ, ಬಿಇಒ ಅನಂತರಾಜು, ತಾಪಂ ಇಒ ವೇಣು, ಪುರಸಭಾ ಮುಖ್ಯಾಧಿಕಾರಿ ರಾಣಿ, ತಾಲೂಕು ವಿಸ್ತರಣಾ ಅಧಿಕಾರಿ ಪುಷ್ಪಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್ ಉಪಸ್ಥಿತರಿದ್ದರು.