ಜಿಲ್ಲೆ

ಕನ್ನಡ ಮಾತನಾಡುವವರು ದಿನೇ ದಿನೆ ಕ್ಷೀಣ: ಲೇಖಕಿ ಕೆ.ಲೀಲಾಪ್ರಕಾಶ್ ಬೇಸರ

ಮೈಸೂರು: ಪ್ರಸ್ತುತ ಕನ್ನಡ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಹಾಗಾಗಿ ಕನ್ನಡ ಮಾತನಾಡುವವರ ಸಂಖ್ಯೆ ದಿನೆ ದಿನೇ ಕಡಿಮೆಯಾಗುತ್ತಿದೆ ಎಂದು ಲೇಖಕಿ ಕೆ.ಲೀಲಾಪ್ರಕಾಶ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ 3ನೇ ಪುಣ್ಯಸ್ಮರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಐದು ಮಂದಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಗುರು-ಶಿಷ್ಯರ ಸಂಬಂಧ ಉತ್ತಮವಾಗಿತ್ತು. ಹಾಗಾಗಿ ಮಕ್ಕಳ ಕಲಿಕೆಗೆ ಶಿಕ್ಷಕರು ಶ್ರಮಿಸುತ್ತಿದ್ದರು. ಆದರೆ ಈಗ ವಿದ್ಯಾರ್ಥಿ, ಗುರುಗಳಲ್ಲಿಯೂ ಆಸಕ್ತಿ ಕಡಿಮೆ ಆಗಿದೆ. ಕನ್ನಡ ಭಾಷೆ ಮಾತನಾಡುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಆದ್ದರಿಂದ ಕನ್ನಡ ಭಾಷೆಯನ್ನು ಎಲ್ಲ ಕ್ಷೇತ್ರದಲ್ಲಿ ಬಳಕೆ ಮಾಡಿದರೆ, ಮಾತ್ರ ಕನ್ನಡ ಬೆಳವಣಿಗೆ ಸಾಧ್ಯ ಎಂದರು.

ನಟ ಪುನೀತ್‌ರಾಜ್‌ಕುಮಾರ್ ನಟನೆಯ ಚಿತ್ರಗಳು ಅಮೂಲ್ಯ ಕಥಾವಸ್ತುಗಳನ್ನು ಒಳಗೊಂಡಿವೆ. ಇಂತಹ ನಟರು ನಾಡಿಗೆ ಬೇಕಿದೆ ಎಂದು ಪುನೀತ್ ಕುರಿತ ಸ್ವರಚಿತ ಕವಿತೆಯನ್ನು ಓದಿ, ನುಡಿನಮನ ಸಲ್ಲಿಸಿದರು.

ಮೈಸೂರು ಕುದೇರು ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ನಾಡು-ನುಡಿ, ಪರಂಪರೆ ಉಳಿವಿಗೆ ಹೋರಾಡುವ ವ್ಯಕ್ತಿಗಳನ್ನು ಸಂಘ-ಸಂಸ್ಥೆಗಳು ಗುರುತಿಸಬೇಕು. ಈ ಕಾರ್ಯವನ್ನು ಜಿಲ್ಲಾ ಕಸಾಪ, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸೇವಾ ಕ್ಷೇತ್ರದಿಂದ ಡಿ.ಪಿ.ಕೆ.ಪರಮೇಶ್, ಶಿಕ್ಷಣ ಕ್ಷೇತ್ರ ಎಸ್.ರಾಜೇಂದ್ರ, ಸಮಾಜ ಸೇವಾಕ್ಷೇತ್ರ ಸುರೇಶ್ ಚಕ್ಕೋಡನಹಳ್ಳಿ, ಕೆ.ಪಿ.ಯೋಗೇಶ್, ಸಂಗೀತ ಕ್ಷೇತ್ರ ಸಿದ್ದರಾಜು ಅವರಿಗೆ ಕನ್ನಡ ಯುವರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಿಪ್ರಮುಖಂಡ ಕೆ.ರಘುರಾಂ ವಾಜಪೇಯಿ, ಗೋಲ್ಡ್ ಸುರೇಶ್ ಇದ್ದರು.