ಮೈಸೂರು: ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸುವ ವಾತಾವರಣ ಸೃಷ್ಟಿಸಬೇಕು. ಇದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವತಿಯಿ ಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ‘ಕರ್ನಾಟಕ’ ನಾಮಕರಣದ ಸುವರ್ಣ ಮಹೊ ೀತ್ಸವ ಅಂಗವಾಗಿ ಏರ್ಪಡಿಸಿದ್ದ ‘ಕರ್ನಾಟಕ ಸಾಂಸ್ಕೃತಿಕ ಮುನ್ನೋಟ : ಚಿಂತನಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕರ್ನಾಟಕದಲ್ಲಿ ಯಾವ ಭಾಷೆಯನ್ನಾದರೂ ಬಳಸಿ ಬದುಕಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೇ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಹಾಗೂ ಅಗ್ರಭಾಷೆ. ಹಾಗಾಗಿ ಅನ್ಯರಾಜ್ಯ, ವಿದೇಶದಿಂದ ಬಂದಂತವರು ಕನ್ನಡವನ್ನು ಕಡ್ಡಾಯವಾಗಿ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು. ರಾಜ್ಯದಲ್ಲಿ ವಾಸ ಮಾಡುವವರೆಲ್ಲರೂ ಕನ್ನಡಿಗರಾಗಬೇಕು ಹಾಗೂ ಅವರು ಕನ್ನಡ ಮಾತನಾಡುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಕನ್ನಡವು ಏಳು ಕೋಟಿ ಕನ್ನಡಿಗರ ಉಸಿರಾಗಬೇಕು ಎಂದು ಕರೆ ನೀಡಿದರು.
ನಾವು ಯಾವುದೇ ಭಾಷೆಯನ್ನು ದ್ವೇಷಿಸುವುದಿಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು, ಆದರೇ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಬೇರೆ ರಾಜ್ಯದ ಜನರಂತೆ ನಾವು ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ನಾವು, ಕನ್ನಡ ನಾಡು ನುಡಿಗೆ ನಮ್ಮದೇ ಅದ ಕೊಡುಗೆಯನ್ನು ನೀಡಿ, ಬೆಳಸಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು 1973ರಲ್ಲಿ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದರು. ‘ಕರ್ನಾಟಕ’ ನಾಮಕರಣ ಮಾಡಿ 2022-23ಕ್ಕೆ 50 ವರ್ಷ ಪೂರೈಸಿದ್ದು, ಅಂದಿನ ಸರ್ಕಾರ ಸಂಭ್ರಮಾಚರಣೆಯನ್ನು ಮಾಡಬೇಕಿತ್ತು. ಕಾರಣಾಂತರಗಳಿಂದ ನಡೆಯದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ವಿಧಾನಸೌಧ ಮುಂಭಾಗ ನಾಡದೇವತೆ ತಾಯಿ ಶ್ರೀ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗುವುದು. ನವೆಂಬರ್ 1 ರಂದು ಈ ಪ್ರತಿಮೆಯನ್ನು ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಪ್ರತಿಮೆ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿ ನವೆಂಬರ್ 1 ರಂದು ಅನಾವರಗೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ಸಚಿವ ಶಿವರಾಜ ಎಸ್. ತಂಗಡಗಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಮಾತನಾಡಿ, ಕನ್ನಡದ ಸಾಹಿತ್ಯ ಹಾಗೂ ಸಂಸ್ಕೃತಿಯ ಪರಂಪರೆಯು ದೊಡ್ಡದಿದ್ದು, ಸಂಸ್ಕೃತಿಕ ನಾಯಕರಾದ ಬಸವಣ್ಣ, ಕುವೆಂಪು, ಕಾರಂತರಂತಹ ಮಹಾನ್ ಸಾಹಿತಿಗಳು ಕೊಡುಗೆ ನೀಡಿದ್ದಾರೆ. ಇವರು ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿ, ಅವೈಜ್ಞಾನಿಕ ಮತ್ತು ಮೂಡನಂಬಿಕೆಗಳನ್ನು ಧಿಕ್ಕರಿಸಿ ಜನರಿಗೆ ನಿಜವಾದ ಸಂಸ್ಕೃತಿಯನ್ನು ತಿಳಿಸಲು ಮುಂದಾಗಿದ್ದರು ಎಂದರು.
ಜಾತಿ ವ್ಯವಸ್ಥೆ, ಧರ್ಮಾಧಾರಿತ ಪ್ರಾಬಲ್ಯವನ್ನು ಹೋಗಲಾಡಿಸಲು ನಮ್ಮ ನಾಡಿನ ಹಿರಿಯರು ಕಾಲ-ಕಾಲಕ್ಕೆ ಸಂಸ್ಕೃತಿಯ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಇಂದಿನ ಕವಿಗಳು ಮತ್ತು ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಅಭಿವೃದ್ಧಿಯ ಬೆಳಕು ತರಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ ಇತಿಹಾಸ ಬರೆದಂತಹ ಕ್ಷಣಕ್ಕೆ ಇಂದು 50 ವರ್ಷ ತುಂಬಿದೆ. ಅಂದು ನಾಮಕರಣ ಮಾಡಿದ ಮಾದರಿಯಲ್ಲಿಯೇ ಇಂದು 50 ವರ್ಷದ ಸಂಭ್ರಮಾಚಾರಣೆಯನ್ನು ಮಾಡಲಾಗುತ್ತಿದ್ದು, ಸುವರ್ಣ ಸಂಭ್ರಮ ಕರ್ನಾಟಕದ ರಥವನ್ನು ನಿರ್ಮಿಸಿ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮೆರವಣಿಗೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮದ ಅರ್ಥವು ಅನ್ಯ ರೂಪತಾಳಿ ಗಲಭೆಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಸಾಹಿತಿಗಳು ಅವುಗಳನ್ನು ಹೋಗಲಾಡಿಸಲು ಮುಂದಾಗಿ, ಎಲ್ಲ ಜನರಲ್ಲೂ ಸಾಮರಸ್ಯವನ್ನು ಮೂಡಿಸಿ ಅಭಿವೃದ್ಧಿಯ ಲೇಪನವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಹಂಪ ನಾಗರಾಜಯ್ಯ, ರಾಜ್ಯ ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲ್ಸೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ. ತ.ಚಿಕ್ಕಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಹಾಗೂ ಇತರರು ಇದ್ದರು.