ಸೋಮವಾರಪೇಟೆ: ಶಿಕ್ಷಣ ವ್ಯವಸ್ಥೆಯ ಮೂಲಕ ಕನ್ನಡವನ್ನು ಗಟ್ಟಿಯಾಗಿ ಬೇರೂರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಿಸಿದರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಸಾಹಿತ್ಯೋತ್ಸವ-2024ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಕೋಳಿ ಕೂಗುವ ಸಮಯದಲ್ಲೇ ಮಕ್ಕಳು ಶಾಲೆಗೆ ಹೋಗುವಂತಹ ಸ್ಥಿತಿ ಬಂದಿದೆ. ಪೂರ್ವ ಪ್ರಾಥಮಿಕ ತರಗತಿಯಿಂದ ಇಂಗ್ಲೀಷ್ ಹೇರಲಾಗುತ್ತಿದೆ. ಕೆಲ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಬೋಧನೆಗೆ ಅಸಡ್ಡೆ ತೋರಿಸಲಾಗುತ್ತಿದೆ. ಇಂಗ್ಲಿಷ್ ಕಲಿಕೆಯಿಂದ ಮಾತ್ರ ನೌಕರಿ ಎಂದು ಬಿಂಬಿಸಲಾಗುತ್ತಿದೆ. ಬಹುತೇಕ ಪಾಲಕರು ಕೂಡ ಮಕ್ಕಳಿಗೆ ಕನ್ನಡ ಪ್ರೀತಿ ಬೆಳೆಸುತ್ತಿಲ್ಲ. ಮಕ್ಕಳಲ್ಲಿ ಕನ್ನಡ ಬಗ್ಗೆ ತಿರಸ್ಕಾರ ಭಾವನೆ ಮೂಡಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನ್ಯಭಾಷೆಗಳ ನಡುವೆ ಮಾತೃಭಾಷೆಯನ್ನು ಉಳಿಸುವುದು ಸವಾಲಿನ ಕೆಲಸವಾಗಿದೆ. ಶಿಕ್ಷಕರು ಕನ್ನಡದ ಕಟ್ಟಾಳುಗಳಾಗಬೇಕು, ಮಕ್ಕಳಿಗೆ ಮಾತೃ ಭಾಷೆ ಕನ್ನಡದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಬೇಕು. ಹಿಂದಿನ ತಲೆಮಾರಿನವರು ಕನ್ನಡ ಉಳಿಸಿ ನಮ್ಮ ಕೈಗೆ ಕೊಟ್ಟಿದ್ದಾರೆ. ಕನ್ನಡ ಮತ್ತು ಕನ್ನಡಿಗರು ಒಗ್ಗಟ್ಟಾಗಬೇಕು ಎಂದು ಹೇಳಿದರು.
ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮಿಗಳು ಮಾತನಾಡಿ, ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿದವರಲ್ಲಿ ಕನ್ನಡವೇ ಉಸಿರಾಗಬೇಕು. ಸ್ಪಷ್ಟ ಕನ್ನಡ ಕಲಿತರೆ, ಅನ್ಯಭಾಷೆಗಳನ್ನು ಸಲೀಸಾಗಿ ಕಲಿಯಬಹುದು ಎಂದು ಹೇಳಿದರು. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ 22 ಭಾಷೆಗಳಿಗೆ ಅನುಸೂಚಿಯಾಗಿದೆ. ವಿದ್ಯಾರ್ಥಿಗಳಿಗೆ 8 ಜ್ಞಾನಪೀಠ ಪ್ರಶಸ್ತಿ ಪಡೆದ ಮಹಾನ್‌ಚೇತನಗಳು ಆದರ್ಶವಾಗಬೇಕು. ಅಂತಹವರ ಕವಿತೆ, ಸಾಹಿತ್ಯಗಳನ್ನು ಓದಿಕೊಂಡರೆ, ಕನ್ನಡ ಪಾಂಡಿತ್ಯ ಪಡೆಯಬಹುದು ಎಂದು ಆಶಿಸಿದರು.
ಓಎಲ್‌ವಿ ಚರ್ಚ್‌ನ ಧರ್ಮಗುರು ಎಚ್.ಎನ್.ಅವಿನಾಶ್ ಮಾತನಾಡಿ, ಕನ್ನಡ ಭಾಷೆ ಬೆಳೆವಣಿಗೆಯಲ್ಲಿ ನಮ್ಮೆಲ್ಲರ ಪಾತ್ರವಿದೆ. ನವೆಂಬರ್ ಕನ್ನಡಿಗರಾಗಬಾರದು. ಪಾಲಕರು ಮೊದಲು ಕನ್ನಡ ಭಾಷೆಯಲ್ಲಿ ಕಲಿಸಿಕೊಡಿ, ನಂತರ ಇತರ ಭಾಷೆಗಳನ್ನು ಕಲಿಯಲು ಪ್ರೋತ್ಸಾಹ ನೀಡಿ ಎಂದು ಹೇಳಿದರು.
ಹೊಸೂರು ಮುಹಿಯದ್ದಿನ್ ಜುಮಾ ಮಸ್ಜಿದ್ ಧರ್ಮಗುರು ಶಾಫೀ ಸಅದಿ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಗೆ ಇರುವಂತ ಕ.ಸಾ.ಪ.ದಲ್ಲಿ 3.90ಲಕ್ಷ ಸದಸ್ಯರಿದ್ದಾರೆ. ಭಾಷಾ ವಿಷಯದಲ್ಲಿ ಇಷ್ಟು ದೊಡ್ಡ ಸಂಘಟನೆ ಇಲ್ಲವೆ ಇಲ್ಲ ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಮೂರನೇ ವಯಸ್ಸಿನಿಂದ ಮಕ್ಕಳಿಗೆ ಕನ್ನಡವನ್ನು ಕಲಿಸಲೇಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸಾಂಧಿಪನಿ ಶಾಲೆಯ ವ್ಯವಸ್ಥಾಪಕ ಎಂ.ಟಿ.ದಾಮೋಧರ್, ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ, ಎಐಟಿಯುಸಿ ಎಚ್.ಎಂ.ಸೋಮಪ್ಪ, ಸಾಹಿತಿ ಜಲಜಾ ಶೇಖರ್, ಕವಯತ್ರಿ ಜಲಾ ಕಾಳಪ್ಪ, ಬಳಗುಂದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರಿತಶ್ರೀ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ.ಸಾ.ಪ.ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಹೋಬಳಿ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್, ಸಿ.ಎಸ್.ನಾಗರಾಜ್, ಬಿ.ಟಿ.ನಾಗರಾಜ್, ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್, ಎಚ್.ಜೆ.ಜವರಪ್ಪ, ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್, ಎ.ಪಿ.ವೀರರಾಜು, ಖಜಾಂಚಿ ಕೆ.ಪಿ.ದಿನೇಶ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಹಿರಿಯ ವಕೀಲ ಎಚ್.ಸಿ.ನಾಗೇಶ್, ಲೇಖಕಿ ಶ.ಗ.ನಯನತಾರಾ ಇತರರು ಭಾಗವಹಿಸಿದ್ದರು.