ಜಿಲ್ಲೆ

ಮೀಸಲಾತಿ ವಿಧೇಯಕ ಅಂಗೀಕರಿಸಲು ಆಗ್ರಹ: ರಸ್ತೆಯಲ್ಲಿ ಮಲಗಿ ಕನ್ನಡಸೇನೆ ಕಾರ್ಯಕರ್ತರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಶಾಸನ ಸಭೆಗಳಲ್ಲಿ ಮಂಡನೆ ಮಾಡುವುದರ ಜತೆಗೆ ಅಂಗೀಕರಿಸಬೇಕೆಂದು ಒತ್ತಾಯಿಸಿ ಸೋಮವಾರ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸುವ ಹಾಗೂ ಮೀಸಲಾತಿ ವಿರೋಧಿಸಿದ ಫೋನ್‌ಪೇ ಮಾಲೀಕನ ವಿರುದ್ಧ ಘೋಷಣೆ ಕೂಗಿ ಮತ್ತು ಆ್ಯಪ್ ಅನ್‌ಇನ್‌ಸ್ಟಾಲ್ ಮಾಡುವ ಆಕ್ರೋಶ ಹೊರಹಾಕಿದರು.

ಮಂಜುನಾಥ್ ಮಾತನಾಡಿ, ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆದರೆ ಕೈಗಾರಿಕೋದ್ಯಮಿಗಳು ವಿರೋಧ ಮಾಡಿದ್ದರಿಂದ ಕಾಯ್ದೆ ಜಾರಿಗೆ ತಾತ್ಕಾಲಿಕವಾಗಿ ತಡೆ ನೀಡಿರುವುದು ಕನ್ನಡಿಗರಿಗೆ ಮಾಡಿದ ದ್ರೋಹವಾಗಿದೆ. ವಿಧೇಯಕವನ್ನು ಶಾಸನ ಸಭೆಗಳಲ್ಲಿ ಮಂಡಿಸಿ ಅಂಗೀಕಾರ ಪಡೆದು ಕಾಯ್ದೆ ಜಾರಿ ಮಾಡುವ ಮೂಲಕ ಕಾರ್ಪೊರೇಟ್ ವಲಯದ ಉದ್ಯಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಜಿ.ಮಹಾಂತಪ್ಪ, ಜಿಲ್ಲಾ ಉಪಾಧ್ಯಕ್ಷ ಮಧು, ಪ್ರಧಾನ ಕಾರ್ಯದರ್ಶಿ ಮಂಜು, ದೇವಮ್ಮ, ಜಯಮ್ಮ, ರಘು, ಸತೀಶ್, ರಾಘವೇಂದ್ರ, ಕಿರಣ್, ಹೊಳಲು ಪ್ರಸನ್ನ, ವೇಣುಗೋಪಾಲ್, ಪಾಂಡು ಇತರರಿದ್ದರು.