ಜಿಲ್ಲೆ

ನ.8ರಂದು ಜಾಗೃತಿ ಸಮಾವೇಶ: ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಗಾಂಧಿಭವನದಲ್ಲಿ ನ.8ರಂದು ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವ ಹಾಗೂ ಹಾಸ್ಯ ಮತ್ತು ಮಿಮಿಕ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಹೇಳಿದರು.

ಅಂದು ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮವನ್ನು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ವಹಿಸುವರು. ಕನ್ನಡ ಜಾಗೃತಿ ಕುರಿತು ಚಿತ್ರನಟ ಮುಖ್ಯಮಂತ್ರಿ ಚಂದ್ರು ಮಾತನಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ರವಿಕುಮಾರ್ ಗಣಿಗ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ನಗರಸಭೆ ಅಧ್ಯಕ್ಷ ಎಂ.ವಿ.ನಾಗೇಶ್, ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಗಣ್ಯರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದಕ್ಕೂ ಮುನ್ನ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ವಿವಿಧ ಕಲಾತಂಡಗಳೊಂದಿಗೆ ಗಾಂಧಿ ಭವನದವರೆಗೆ ಮೆರವಣಿಗೆ ಆಯೋಜಿಸಲಾಗಿದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ಚರ್ಚೆ ಗಾಢವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸುವುದರೊಂದಿಗೆ ಬಿಬಿಎಂಪಿ ಸದಸ್ಯರಾಗಿ, ಶಾಸಕರಾಗಿಯೂ ಸೇವೆ ಸಲ್ಲಿಸಿರುವ ವಾಟಾಳ್ ನಾಗರಾಜ್ ಅವರನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ದೇವಮ್ಮ, ಸೌಭಾಗ್ಯಾ ಶಿವಲಿಂಗು, ಎಂ.ಎಸ್.ಮಂಜುನಾಥ್, ಪವಿತ್ರಾ ನಾಗರಾಜು, ಜಿ.ಮಹಂತಪ್ಪ, ಕಮ್ಮನಾಯಕನಹಳ್ಳಿ ಮಂಜು ಇದ್ದರು.