ಮಂಡ್ಯ: ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಹೆದ್ದಾರಿ ಸಂಚಾರ ತಡೆ ನಡೆಸಿ ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ತಮಿಳುನಾಡಿಗೆ ನಿರಂತರ ನೀರು ಹರಿಸಿ ಕಾವೇರಿ ಕೊಳ್ಳದ ಜಲಾಶಯಗಳನ್ನ ಬರಿದು ಮಾಡಿರುವ ರಾಜ್ಯ ಸರ್ಕಾರ ರೈತರನ್ನು ಸಂಕಷ್ಟಕ್ಕೆದೂಡಿದೆ. ಆದ್ದರಿಂದ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹಿತ ಕಾಪಾಡಲು ಸಾವಿರ ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕಾವೇರಿ ಕೊಳ್ಳದ ಜಲಾಶಯಗಳ ನೀರು ಸಂರಕ್ಷಣೆ ಹಾಗೂ ಬೆಂಗಳೂರಿನ ಜನತೆಗೆ ಕುಡಿಯುವ ನೀರು ಸಂಗ್ರಹ ಮಾಡುವ ಉದ್ದೇಶದ ಮೇಕೆದಾಟು ಯೋಜನೆಯನ್ನು ತುರ್ತಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಅಂತೆಯೇ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಅಂಗಡಿಗಳಲ್ಲಿ ಹಾಕಲಾಗಿರುವ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕಬೇಕು. ಅಪ್ಪಟ ಕನ್ನಡಿಗರ ಜಿಲ್ಲೆ ಎಂದು ಪ್ರಸಿದ್ಧಿ ಪಡೆದಿರುವ ಮಂಡ್ಯ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆಯಾಗಿದ್ದು, ವ್ಯಾಪಾರ ವಹಿವಾಟು ಸ್ಥಳದಲ್ಲಿ ಅಂಗಡಿಗಳ ನಾಮಫಲಕಗಳನ್ನು ಹಾಕದೆ ವರ್ತಕರು ಕಡೆಗಣಿಸಿರುವುದು ಕಂಡು ಬಂದಿದೆ. ಕನ್ನಡ ರಾಜ್ಯೋತ್ಸವ ಆಚರಣೆಯ ಸುಸಂದರ್ಭದಲ್ಲಿ ಕನ್ನಡ ಬರಹಯುಳ್ಳ ನಾಮಫಲಕಗಳನ್ನು ಹಾಕುವಂತೆ ವರ್ತಕರಿಗೆ ಸೂಚಿಸಬೇಕು ಅದೇ ರೀತಿ ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳು, ತಾಲೂಕು ಆಡಳಿತ, ಪ್ರಾಧಿಕಾರಗಳಿಗೆ ಕನ್ನಡ ಪ್ರಧಾನವಾಗಿರುವ ನಾಮಫಲಕಗಳನ್ನು ಕಡ್ಡಾಯವಾಗಿ ಅಂಗಡಿಗಳ ಮೇಲೆ ಹಾಕಲು ಆದೇಶ ಮಾಡಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸ ಬೇಕು ಎಂದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಎಂ.ಎಸ್.ಮಂಜುನಾಥ್, ಮಹಾಂತಪ್ಪ, ರವಿ, ಶಿವರಾಮ, ಎಂ.ಸಿ.ನಿತ್ಯಾನಂದ, ರಿಯಾಜ್ ಪಾಷಾ, ದೇವಮ್ಮ, ಎಂ.ಎನ್.ರಾಜೇಶ್ವರಿ, ಶಿವಾಲಿ, ಕಮ್ಮನಾಯಕನಹಳ್ಳಿ ಮಂಜು, ಚಂದ್ರು, ಅಭಿಷೇಕ್, ಭಾನುಮತಿ ಇತರರಿದ್ದರು.