ಜಿಲ್ಲೆ

ಕಮಲ್‌ಹಾಸನ್ ಹೇಳಿಕೆ ದುರುದ್ದೇಶಪೂರಿತ: ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಟೀಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಕನ್ನಡ ಭಾಷೆ ತಮಿಳಿನಿಂದ ಉಗಮವಾಯಿತು ಎಂದಿರುವ ಹೇಳಿಕೆ ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಟೀಕಿಸಿದ್ದಾರೆ.

ಈ ಹೇಳಿಕೆ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಹೊಂದಿವೆ. ಕನ್ನಡ ಭಾಷೆಗೆ ಸುಮಾರು 4600 ರಿಂದ 5000 ವರ್ಷದ ಇತಿಹಾಸವಿದೆ. ಭಾಷಾ ಶಾಸ್ತ್ರೀಯ ಅಧ್ಯಯನದ ಪ್ರಕಾರ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ (ಪ್ರೊಟೊ-ದ್ರಾವಿಡಿಯನ್) ಸುಮಾರು 2500 ರಿಂದ 3000 ಕ್ರಿ.ಪೂ ಆಸುಪಾಸಿನಲ್ಲಿ ಕವಲೊಡೆದಿವೆ. ಅಶೋಕನ ಕಾಲದ ಪ್ರಾಕೃತ ಶಾಸನಗಳಲ್ಲಿ(ಕ್ರಿ.ಪೂ. 3ನೇ ಶತಮಾನ) ಕರ್ನಾಟಕದಲ್ಲಿ ಕಂಡುಬಂದ ಕೆಲವು ಶಾಸನ ಕನ್ನಡದ ಆದಿಪದಗಳ ಬಳಕೆ ಸೂಚಿಸುತ್ತವೆ. ಕನ್ನಡದ ಲಿಖಿತ ರೂಪಕ್ಕೆ 2000 ವರ್ಷದ ಇತಿಹಾಸವಿದೆ. ತಮಿಳು ಸಾಹಿತ್ಯಕ್ಕೆ ಪ್ರಾಚೀನತೆಯಿದ್ದರೂ, ಕನ್ನಡಕ್ಕಿಂತ ಹಳೆಯದು ಎನ್ನಲು ಯಾವುದೇ ಐತಿಹಾಸಿಕ ಅಥವಾ ಭಾಷಾಶಾಸ್ತ್ರೀಯ ಆಧಾರಗಳಿಲ್ಲ. ಕಮಲ್ ಹಾಸನ್ ಮಾತನಾಡುವಾಗ ಕನ್ನಡಿಗರ ಭಾವನೆಗೆ ಧಕ್ಕೆ ತರುವಂತೆ ಮಾಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆದು ಕನ್ನಡಿಗರಿಗೆ ಕ್ಷಮೆಯಾಚನೆ ಮಾಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.